Monday, June 17, 2013

RATHAMUSALA: NOW PUBLISHED


English translation of my Rathamusla is now published.

Those who want to translate  and/ or stage this play, please contact me at the following address:

Dr. Ramachandra Deva
Care Bodhi Trust
Post Kalmadka 574212
Bellare, Karnataka, India.
Email: bodhitrustk@gmail. com
Phone: 9482622589

Those who want to buy copies, please contact

Bodhi Trust
Post Kalmadka 574212
Bellare, Karnataka, India
Email: bodhitrustk@gmail.com
Tuesday, May 21, 2013

ಸಿ ವಿಟಮಿನ್

ಇವತ್ತಿನ ಸುದ್ದಿ ಪ್ರಕಾರ ಔಷಧಿಯಿಂದ ಗುಣವಾಗದ ಒಂದು ಬಗೆಯ ಟೀಬಿ ಸಿ ವಿಟಮಿನ್ ಸೇವನೆಯಿಂದ ಗುಣವಾಗಿದೆಯಂತೆ. ವಿಜ್ಞಾನಿಗಳು ಇದನ್ನು ಆಕಸ್ಮಿಕವಾಗಿ ಪತ್ತೆ ಮಾಡಿದ್ದಾರೆ. ಈಗಾಗಲೇ ಇದು ಹೃದ್ರೋಗವೂ ಸೇರಿದಂತೆ ಬೇರೆ ಖಾಯಿಲೆಗಳಲ್ಲಿ ಪರಿಣಾಮಕಾರಿ ಎಂದು ಗೊತ್ತಾಗಿದೆ.

ಪ್ರಯೋಗಶೀಲ ವೈದ್ಯರು ವಿಟಮಿನ್ ಸಿಯ ಇನ್ನಷ್ಟು ಪ್ರಯೋಜನಗಳನ್ನು ಪತ್ತೆ ಮಾಡಿ ಹೇಳಬೇಕು. ಇದರ ಸೇವನೆಯಿಂದ ಸೈಡ್ ಎಫೆಕ್ಟ್ ಇಲ್ಲ; ತುಂಬಾ ಅಗ್ಗ; ಆಸ್ಪತ್ರೆ ವಾಸವನ್ನು ಮಿತಗೊಳಿಸಿಕೊಳ್ಳಬಹುದು. ಹಾಗಾಗಿಯೇ ಇದು ಜನರಿಗೆ ಗೊತ್ತಾಗಬೇಕು. ಆದರೆ ಇದನ್ನು ಹೇಳಬೇಕಾದವರು ನನ್ನಂಥವರು ಅಲ್ಲ. ಬಲ್ಲ ವೈದ್ಯರು ಇದರ ಬಗ್ಗ ಅನುಭವ ಪಡೆದು, ಪ್ರಯೋಗ ಮಾಡಿ ನೋಡಿ ಹೇಳಬೇಕು.

Wednesday, April 24, 2013

RATHAMUSALA

The covers of all my books published during the last four years are done by John Chandran, a young talented artist. The cover for Rathamusala in English is also designed by him.

The photo on the cover shows a scene from the original Kannada play directed by Krishna Kumar Narnakaje, and staged by Rangasiri, a drama troupe from Hassan, Karnataka.

The book will be available for sale in a few days. As usual, I started revising it again in the final stage, and hence the delay.

Sunday, April 21, 2013

ಮುರಳೀಧರ ಉಪಾಧ್ಯ

ಪೂರ್ಣಚಂದ್ರ ತೇಜಸ್ವಿ ಇದ್ದಾಗ ಕಂಪ್ಯೂಟರ್ ಮತ್ತು ಅದರ ಅಗತ್ಯಗಳ ಬಗ್ಗೆ ತುಂಬಾ ಹೇಳುತ್ತಿದ್ದರು. ಕಂಪ್ಯೂಟರನ್ನು ನಾವು ಕನ್ನಡಿಗರು ಸರಿಯಾಗಿ ಬಳಸಲು ಕಲಿಯದಿದ್ದರೆ ಜಾಗತಿಕ ವಲಯದಲ್ಲಿ ಹಿಂದುಳಿದು ಬಿಡುತ್ತೇವೆ ಎಂದು ಎಚ್ಚರಿಸುತ್ತಿದ್ದರು. ಉಳಿದು ಬಿಟ್ಟಿದ್ದೇವೆ ಎಂಬುದು ಕಂಪ್ಯೂಟರ್ ಬಳಸಿ ಇಂಗ್ಲಿಷಿನಂಥಾ ಭಾಷೆಯಲ್ಲಿ ನಡೆಯುತ್ತಿರುವ ಕೆಲಸ ನೋಡಿದರೆ ಗೊತ್ತಾಗುತ್ತದೆ. ನಮ್ಮಲ್ಲಿ ಹಣ ಇಲ್ಲ ಎನ್ನುವುದರಲ್ಲಿ ಅರ್ಥವಿಲ್ಲ. ಹೆಚ್ಚು ಹಣ ಖರ್ಚು ಮಾಡದೆ ಮಾಡಬಹುದಾದ ಕಂಪ್ಯೂಟರಿನ ಕೆಲವು ಸರಳ ಕೆಲಸಗಳನ್ನೂ ನಾವು ಮಾಡುತ್ತಿಲ್ಲ. ನಮ್ಮಲ್ಲಿ ಹೆಚ್ಚಿನ ಲೇಖಕರಿಗೆ ಇಮೇಲ್ ಇಲ್ಲ, ಬ್ಲಾಗ್ ಇಲ್ಲ ಎಂಬುದನ್ನು ಗಮನಿಸಿದರೆ ಮೇಲಿನ ಮಾತು ಅರ್ಥವಾಗುತ್ತದೆ. ಕಂಪ್ಯೂಟರ್ ನ ಅತ್ಯಂತ ಆಧುನಿಕ ತಂತ್ರಜ್ಞಾನ ಬಂದ ಮೇಲೂ ನಾವು ಅಚ್ಚಿನ ತಪ್ಪಿಲ್ಲದೆ ಪುಸ್ತಕ ಮುದ್ರಿಸುವುದನ್ನೇ ಕಲಿತಿಲ್ಲ. ತಿದ್ದುಪಡಿ ನಮ್ಮ ಪುಸ್ತಕಗಳ ವಿಶೇಷ ಲಕ್ಷಣವೇ ಆಗಿಬಿಟ್ಟಿದೆ.

ಇಂಥಲ್ಲಿ ಮುರಳೀಧರ ಉಪಾಧ್ಯ ಕಂಪ್ಯೂಟರ್ ಬಳಸಿ ಮಾಡುತ್ತಿರುವ ಕೆಲಸಗಳು ಸರ್ವತ್ರ ಮೆಚ್ಚುಗೆಗೆ ಅರ್ಹ. ಅವರು ಕನ್ನಡದ ಎಲ್ಲಾ ಬ್ಲಾಗುಗಳು ಒಂದು ಕಡೆ ನೋಡಲು ಸಿಗುವಂತ ಮಾಡಿದ್ದಾರೆ; ಅದರಲ್ಲಿ ಮುಖ್ಯವಾದ ಲೇಖನ ಭಾಷಣ ಬೇಕಾದವರಿಗೆ ಸಿಗುತ್ತವೆ; ಮೊನ್ನೆ ಆಡಿಯೋದ ಮೂಲಕ ಲೇಖಕರೋ ವಿದ್ವಾಂಸರೋ ಓದಿದ ಪದ್ಯ ಅಥವಾ ಅವರ ಭಾಷಣ, ಮಾತು ತರುಣ ಅಧ್ಯಾಪಕರಿಗೆ, ಲೇಖಕರಿಗೆ, ವಿದ್ವಾಂಸರಿಗೆ ಸಿಗುವ ಹಾಗೆ ಮಾಡುವ ಬಗ್ಗೆ ಮಾತಾಡಿದರು. ನಮ್ಮಲ್ಲಿ ಇಂದು ಚಿದಾನಂದಮೂರ್ತಿ, ಕಲಬುರ್ಗಿಯವರಂಥಾ ದೊಡ್ಡ ವಿದ್ವಾಂಸರು, ಭೈರಪ್ಪನವರಂಥಾ ಬಹು ಶ್ರೇಷ್ಠ ಸೃಜನಶೀಲ ಲೇಖಕರು ಇದ್ದಾರೆ; ತಿರುಮಲೇಶ್, ಲಕ್ಷ್ಮಣ ರಾವ್ ಅಂಥಾ ಒಳ್ಳೆಯ ಕವಿಗಳಿದ್ದಾರೆ. ಇವರ ಮಾತು, ಕಾವ್ಯ ತರುಣರಿಗೆ ಆಸಕ್ತರಿಗೆ ಕಂಪ್ಯೂಟರ್ ಮೂಲಕ ಸಿಗುವ ಹಾಗೆ ಮಾಡುವುದರಲ್ಲಿ ಮುರಳೀಧರರ ಕೆಲಸ ಮುಖ್ಯ.

ಇಂಗ್ಲಿಷಿನಲ್ಲಿ ಇಂದು ಎಲಿಯಟ್, ಯೇಟ್ಸ್ ಮೊದಲಾದವರು ಸ್ವತಃ ಓದಿದ ಅವರ ಪದ್ಯಗಳು ಕೇಳಲು ಸಿಗುತ್ತವೆ. ಕನ್ನಡದಲ್ಲಿ ಬೇಂದ್ರೆ ಅಡಿಗರು ಮೊದಲಾದವರ ಕವನಗಳನ್ನು ಹೀಗೆಯೇ ನಾವು ಆಸಕ್ತರಿಗೆ ತಲುಪಿಸಬಹುದು. ಅವರ ರೆಕಾರ್ಡಿಂಗುಗಳನ್ನು ಪತ್ತೆ ಮಾಡಿ ವ್ಯವಸ್ಥಿತವಾಗಿ ಕಂಪ್ಯೂಟರಿನಲ್ಲಿ ಇಡಬೇಕಾಗಿದೆ. ಸಾಹಿತ್ಯಿಕ ಚರ್ಚೆಗಳೂ ಖಾಯಮ್ಮಾಗಿ ಕೇಳುವಂತೆ ಮಾಡಬಹುದು. ಆ ಕಡೆಗೆ ಉತ್ಸಾಹದಿಂದ ಕೆಲಸ ಮಾಡುತ್ತಿರುವವರಲ್ಲಿ ಮುರಳೀಧರ ಪ್ರಮುಖರು.

ಬಿಎಂಶ್ರೀಯವರ ಕಾಲದಲ್ಲಿ ಇಂಥಾ ಸೌಲಭ್ಯ ಇಲ್ಲದಿದ್ದಾಗ ಊರೂರು ತಿರುಗಿ ಕನ್ನಡದ ಪ್ರಚಾರ ಮಾಡಬೇಕಾಗಿತ್ತು. ಅವರು ಮಾಡಿದರು. ಶಿವರಾಮ ಕಾರಂತರು, ಅವರ ಓರಗೆಯ ಬೇರೆ ಕೆಲವರು ಲೇಖಕರು ಎಲ್ಲಿಗೇ ಕರೆದರೂ ಹೋಗಿ ಭಾಷಣ ಮಾಡುತ್ತಿದ್ದರು. ಇಂದು ಕಂಪ್ಯೂಟರ್ ಇರುವುದರಿಂದ ಲೇಖಕರು ಮನೆಯಲ್ಲಿ ಕೂತೇ ತಮ್ಮ ಓದುಗರನ್ನು ಉದ್ದೇಶಿಸಿ ಮಾತಾಡಲು, ಪದ್ಯ ಓದಲು ಸಾಧ್ಯ. ಅಂಥಾ ಒಂದು ಸಾಧ್ಯತೆಯನ್ನು ತಮ್ಮ ಸೀಮಿತ ಸಂಪನ್ಮೂಲಗಳನ್ನೇ ಬಳಸಿ ಅನ್ವೇಷಿಸುತ್ತಿರುವ ಹೊಸತರ ಹರಿಕಾರರಾಗಿ ನನಗೆ ಮುರಳೀಧರ ಕಾಣಿಸುತ್ತಾರೆ.

ಅನೇಕರು ಉದ್ಯೋಗದಿಂದ ನಿವೃತ್ತರಾದ ಮೇಲೆ ಮನೆಯಲ್ಲಿ ಸುಮ್ಮನೆ ಕೂತರೆ ಇವರು ನಿವೃತ್ತ ಜೀವನವನ್ನು ಹೊಸರೀತಿಯಲ್ಲಿ ಸೃಜಶೀಲರಾಗಲು ಬಳಸಿಕೊಳ್ಳುತ್ತಿದ್ದಾರೆ. ಅದು ಭವಿಷ್ಯದಲ್ಲಿ ಕನ್ನಡಕ್ಕೆ ಬಹು ಹೆಚ್ಚಿನ ಅರ್ಥಪೂರ್ಣತೆ ತಂದುಕೊಡಬಲ್ಲ ಸೃಜನಶೀಲತೆ.

Tuesday, March 26, 2013

ಎಸ್.ಎಲ್. ಭೈರಪ್ಪ

ನನ್ನ ಹೊಸ ಪುಸ್ತಕ ಆರಣ್ಯಕರ ಸುತ್ತಮುತ್ತದಲ್ಲಿ ಭೈರಪ್ಪನವರ ಮೇಲೆ ಒಂದು ಲೇಖನವಿದೆ. ಇದು "ಒಂದು ತಲೆಮಾರಿನ ಕೆಲವರು ಲೇಖಕರು" ಎಂಬ 62 ಪುಟಗಳ ಒಂದು ಲೇಖನದ ಭಾಗ. ಇದರ ಸ್ಥೂಲ ರೂಪ ನಾನು 2011ರಲ್ಲಿ ವಿಜಯವಾಣಿಯಲ್ಲಿ ಬರೆಯುತ್ತಿದ್ದ ಅಂಕಣದಲ್ಲಿ ಪ್ರಕಟವಾಗಿತ್ತು. ಪುಸ್ತಕದಲ್ಲಿ ಲೇಖನವಾಗಿ ಬರುವಾಗ ಹೆಚ್ಚು ವಿವರ ಉದಾಹರಣೆಗಳು ಸೇರಿವೆ. ಅದರ ಕೊನೆಯ ಪ್ಯಾರಾ ಕೆಳಗೆ ಕೊಟ್ಟಿದ್ದೇನೆ. ನನ್ನ ಈ ನಿಲುವು ಇಂದು ಚಾಲ್ತಿಯಲ್ಲಿರುವ ಅನೇಕರು ತೆಗೆದುಕೊಂಡ ನಿಲುವಿಗೆ ತದ್ವಿರುದ್ಧವಾದದ್ದು. ಇದು ಚರ್ಚೆಯಾಗಲಿ, ಭೈರಪ್ಪನವರ ಕಾದಂಬರಿಗಳು ವಿಮರ್ಶಾಕ್ಷೇತ್ರದಲ್ಲಿ ಅವುಗಳ ಸರಿಯಾದ ಸ್ಥಾನದಲ್ಲಿ ಗುರುತಿಸಲ್ಪಡಲಿ ಎಂಬ ದೃಷ್ಟಿ ಹೀಗೆ ನನ್ನ ನಿಲುವಿನ ಸಾರಾಂಶವಾದ ಕೊನೆಯ ಪ್ಯಾರಾ ಕೊಡುವುದರ ಹಿಂದೆ ಇದೆ.

 ನಾನು ಚರ್ಚೆಯಾಗಲಿ ಎಂದು ಬಯಸುವ ಲೇಖನದ ಕೊನೆಯ ಆ ಪ್ಯಾರಾ ಹೀಗಿದೆ:

"ಅನಂತಮೂರ್ತಿ ಜೊತೆಗೆ ಭೈರಪ್ಪನವರನ್ನು ಹೋಲಿಸುವಂತೆ ಅನಂತಮೂರ್ತಿಯವರೇ ಒತ್ತಾಯಿಸುತ್ತಾರೆ. ಯಾಕೆಂದರೆ ಅವರನ್ನು ಜನಪ್ರಿಯ ಕಾದಂಬರಿಕಾರ, ಗಂಭೀರ ಪರಿಶೀಲನೆಗೆ ಅರ್ಹ ಅಲ್ಲ ಎಂಬ ರೀತಿಯಲ್ಲಿ ಬರೆದವರು ಅನಂತಮೂರ್ತಿಯವರೇ. ಆದರೆ ಪರ್ವ ಮತ್ತು ಆನಂತರದ ಕಾದಂಬರಿಗಳಲ್ಲಿ-- ಆವರಣ ಹೊರತುಪಡಿಸಿ-- ಚಿತ್ರಿತವಾಗುವ ಅನುಭವ ವಿಸ್ತಾರ, ಪಾತ್ರ ಚಿತ್ರಣ, ವ್ಯಾಪ್ತಿಗಳು ಅವರನ್ನು ಒಬ್ಬ ಶ್ರೇಷ್ಠ ಕಾದಂಬರಿಕಾರರನ್ನಾಗಿ ಮಾಡಿವೆ. ಅನಂತಮೂರ್ತಿಯವರು ತಮ್ಮ ವಿಮರ್ಶೆ, ಸಾಮಾಜಿಕ ಚಟುವಟಿಕೆ ಮೊದಲಾದವುಗಳಿಂದ ಮುಖ್ಯ ಸಾಹಿತ್ಯಿಕ ಪುರುಷ ನಿಜ; ಆದರೆ ಕಾದಂಬರಿಕಾರರಾಗಿ ಪರ್ವದ ನಂತರದ ಭೈರಪ್ಪನವರೇ ಅವರಿಗಿಂಥ ಶ್ರೇಷ್ಠ. ಭೈರಪ್ಪನವರ ದೃಷ್ಟಿಕೋನ ನನ್ನ ದೃಷ್ಟಿಕೋನ ಅಲ್ಲ ಎಂಬುದು ಅವರ ಉತ್ತಮಿಕೆಯನ್ನು ಮೆಚ್ಚಲು ನನಗೆ ತೊಂದರೆ ಆಗಿಲ್ಲ-- ಎಲಿಯಟ್ ನ ಕ್ರಿಶ್ಚಿಯನ್ ದೃಷ್ಟಿಕೋನ, ಶೇಕ್ ಸ್ಪಿಯರ್ ನ ವಂಶಪಾರಂಪರ್ಯ-ರಾಜತ್ವ-ನಿಷ್ಠ-ದೃಷ್ಟಿಕೋನ ಅವರ ಕೃತಿಗಳನ್ನು ಮೆಚ್ಚಲು ಹೇಗೆ ತೊಂದರೆ ಆಗಿಲ್ಲವೋ ಹಾಗೆ."

Thursday, March 21, 2013

ಹುಟ್ಟುಹಬ್ಬದ ಪುಸ್ತಕಮೇಲಿನದ್ದು ನನ್ನ ಹೊಸ ಪುಸ್ತಕ. ಇದರ ಪ್ರಕಾಶಕರು ಮಿತ್ರ ಶಿವಾನಂದ ಗಾಳಿ. ಇವತ್ತಿನ ನನ್ನ ಹುಟ್ಟು ಹಬ್ಬದ ಪ್ರಯುಕ್ತ ಇದನ್ನು ಉಡುಗೊರೆ ಎಂದು ಪ್ರಕಟಿಸಿ ಪ್ರತಿ ಕಳಿಸಿದ್ದಾರೆ. ನನ್ನ ಮೇಲಿನ ಅವರ ಪ್ರೀತಿಗೆ ಮನಸ್ಸು ತುಂಬಿಬಂದಿದೆ. ಅವರಿಗೆ, ಅವರ ಬಳಗಕ್ಕೆ ಕೃತಜ್ಞ ಎಂದಷ್ಟೇ ಹೇಳಬಲ್ಲೆ.

ಪೀಟರ್ ಬ್ರೂಗೆಲ್ ನ ಇಕಾರಸ್ ಪೇಂಟಿಂಗ್ ಇರುವ ಈ ಮುಖಪುಟದ ವಿನ್ಯಾಸ ಖ್ಯಾತ ಕಲಾವಿದ ಜಾನ್ ಚಂದ್ರನ್ ಅವರದ್ದು.

ಇದರಲ್ಲಿ ಉಪನಿಷತ್ತುಗಳು, ಪಂಪ, ಕನಕದಾಸ, ಶಾಂತಿನಾಥ ದೇಸಾಯಿ, ಮುಳಿಯ ತಿಮ್ಮಪ್ಪಯ್ಯ, ಚಿದಾನಂದಮೂರ್ತಿ, ಭೈರಪ್ಪ, ಯರ್ಮುಂಜ ರಾಮಚಂದ್ರ ಮೊದಲಾದವರ ಮೇಲೆ ಲೇಖನಗಳಿವೆ. 188 ಪುಟಗಳು. ಬೆಲೆ ರೂ90.00.

ಪ್ರಕಾಶಕರ ವಿಳಾಸ:

ಸುಂದರ ಪುಸ್ತಕ ಪ್ರಕಾಶನ
79, ಚಂದ್ರಕಿರಣ, ಎರಡನೆಯ ತಿರುವು,
ಎರಡನೆಯ ಮುಖ್ಯ ರಸ್ತೆ, ಶಕ್ತಿ ನಗರ
ಧಾರವಾಡ --580004

Sunday, March 17, 2013

RATHAMUSALA IN ENGLISH

English translation of my Kannada play Rathamusala is to be published next month. It is ready.

The above are some of the photos of the production of the original Kannada play directed by Krishna Kumar Narnakaje, and produced by Rangasiri, Hassan. This production won the first prize in a competition in Udupi.

Tuesday, February 12, 2013

ಹೃದ್ರೋಗಕ್ಕೆ ವಿಟಮಿನ್ ಸಿ

ಅಮೆರಿಕದ ವೈದ್ಯ ಜಗತ್ತಿನಲ್ಲಿ ವಿಟಮಿನ್ ಸಿ ಇಂದ ಹೃದ್ರೋಗ ಗುಣಪಡಿಸಬಹುದು ಎಂಬ ಒಂದು ಥಿಯರಿಯಿದೆ. ಈ ಥಿಯರಿ ಮಂಡಿಸಿದವನು ಎರಡು ಸಲ ನೋಬೆಲ್ ಪ್ರಶಸ್ತಿ ಪಡೆದ ಅಮೆರಿಕದ ವಿಜ್ಞಾನಿ ಲೈನಸ್ ಪಾಲಿಂಗ್ (Linus Pauling). ವಿಟಮಿನ್ ಸಿಯ ಕೊರತೆಯೇ ಹೃದ್ರೋಗಕ್ಕೆ ಕಾರಣ; ಅದನ್ನು ತಮ್ಮ ದೇಹದಲ್ಲಿ ಉತ್ಪಾದಿಸಿಕೊಳ್ಳುವ ಪ್ರಾಣಿಗಳಿಗೆ ಹೃದ್ರೋಗ ಇಲ್ಲ; ಮನುಷ್ಯನ ದೇಹದಲ್ಲಿ ಅದು ಉತ್ಪಾದಿತ ಆಗುವುದಿಲ್ಲವಾದ್ದರಿಂದ ಅವನು ಅದನ್ನು ಆಹಾರ ಅಥವಾ ಮಾತ್ರೆಗಳ ಮೂಲಕ ಸೇವಿಸಬೇಕು; ಹೃದ್ರೋಗ ಈಗಾಗಲೇ ಬಂದಿದ್ದರೂ ವಿಟಮಿನ್ ಸಿ ಸೇವನೆಯಿಂದ ದೇಹವನ್ನು ಮರಳಿ ಸುಸ್ಥಿತಿಗೆ ತರಬಹುದು ಎಂಬ ವಾದವನ್ನು ಅನೇಕ ವರ್ಷಗಳ ಹಿಂದೆ ಅವನು ಮಂಡಿಸಿದ. ಆದರೆ ಅಮೆರಿಕಾದ ಮೆಡಿಕಲ್ ಅಸೋಸೊಯೇಷನ್ ಅದನ್ನು ಪರೀಕ್ಷಿಸಲೇ ತಯಾರಿರಲಿಲ್ಲ. ಅವನ ಲೇಖನವೂ ಅವರ ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲ; ತಿರಸ್ಕೃತವಾಯಿತು. ಅವನ ಬೆಂಬಲಿಗರು ಇದೆಲ್ಲಾ ಡ್ರಗ್ ಮಾಫಿಯಾದ ಒಳಸಂಚು ಎಂದರು. ಆದರೆ ವಿಟಮಿನ್ ಸಿ ಇಂದ ಹೃದ್ರೋಗ ಗುಣಪಡಿಸಬಹುದು ಎಂಬ ವೈದ್ಯರು ಅಮೆರಿಕಾದಲ್ಲಿ ಕೆಲವರಾದರೂ ಇದ್ದಾರೆ. ಒಬ್ಬಾತ ಸೊಂಟ ನೋವು ಗುಣಪಡಿಸುವುದಕ್ಕಿಂತಲೂ ಬೇಗ ಮತ್ತು ಸುಲಭವಾಗಿ ಹೃದ್ರೋಗ ಗುಣಪಡಿಸಬಹುದು ಎನ್ನುತ್ತಾನೆ. ಪಾರಂಪರಿಕ ವೈದ್ಯಪದ್ಧತಿಯಿಂದ ಅದಕ್ಕೆ ವಿರೋಧ ಬಂದದ್ದೂ ಸಹಜವೇ. ವಿಟಮಿನ್ ಸಿ ಇಂದ ಈ ಮಾರಕ ಬಹು ಖರ್ಚಿನ ರೋಗ ಗುಣ ಆಗುತ್ತದೆ ಎಂದಾದರೆ ನಮ್ಮ ಬಹುಕೋಟಿ ಉದ್ಯಮವಾದ ಹೃದ್ರೋಗ ಚಿಕಿತ್ಸಾಲಯಗಳು ಬಾಗಿಲು ಹಾಕಬೇಕಾಗುತ್ತದೆ. ಬೈಪಾಸ್ ಸರ್ಜರಿ ಏಂಜಿಯೋಪ್ಲಾಸ್ಟಿಗಳು ಅನಗತ್ಯವಾಗುತ್ತವೆ.

ಆದರೆ ವಿಟಮಿನ್ ಸಿಯಿಂದ  ಹೃದ್ರೋಗ ತಹಬಂದಿಗೆ ಬರುತ್ತದೆ ಎನ್ನವುದನ್ನು ನಾನೇ ಅನುಭವಿಸಿದೆ. ನನಗೆ ಕಳೆದ ಇಪ್ಪತ್ತೊಂಬತ್ತು ವರ್ಷಗಳಿಂದ ಹೃದ್ರೋಗವಿದೆ. ಆಪರೇಷನ್, ಏಂಜಿಯೋಪ್ಲಾಸ್ಟಿ ಇತ್ಯಾದಿ ಆಗಿವೆ. ಆದರೂ ಪೂರಾ ಗುಣ ಎಂದಿಲ್ಲ. ಎದೆನೋವು ಬರುತ್ತಿರುತ್ತದೆ --ನಡೆಯುವಾಗ, ಭಾಷಣ ಮಾಡುವಾಗ. ಇನ್ನೊಬ್ಬರಿಗೆ ಗೊತ್ತಾಗದಂತೆ ನಾನು ಅದನ್ನು ಸಾರ್ಬಿಟ್ರಾಟ್ ತಿಂದು ಅಥವಾ ಆಗ ಮಾತು/ನಡಿಗೆ ನಿಲ್ಲಿಸಿ ಹೇಗೋ ಮ್ಯಾನೇಜು ಮಾಡಿಕೊಂಡು ಹೋಗುತ್ತಿದ್ದೆ. ಯಾವಾಗಲೋ ಒಂದು ದಿನ ಇದ್ದಕ್ಕಿದ್ದಂತೆ massive heart attack ಆಗಿ ಕುಸಿದು ಬಿದ್ದು ಸತ್ತು ಹೋಗುತ್ತೇನೆ ಎನ್ನುವುದೂ ನನಗೆ ಗೊತ್ತಿದ್ದದ್ದೇ. ಆದರೆ ಅಷ್ಟರ ವರೆಗೆ ದಿನನಿತ್ಯದ ಜೀವನಕ್ಕೆ ತೊಂದರೆಯಾಗದಂತೆ ನಡೆದುಕೊಂಡು ಹೋಗುತ್ತಿದೆಯಾದ್ದರಿಂದ ಸಾವಿನ ಬಗ್ಗೆ ಅನವಶ್ಯಕ ತಲೆಕೆಡಿಸಿಕೊಳ್ಳುವುದು ವೃಥಾ ಸಮಯ ಹಾಳು ಎಂದುಕೊಳ್ಳುತ್ತಿದ್ದೆ. ಆದರೆ ಈ ಜನವರಿ 7ನೇ ಸಾಯಂಕಾಲ ವಾಕು ಹೊರಟವನಿಗೆ ಹತ್ತು ಹೆಜ್ಜ ನಡೆಯುವುದರೊಳಗೆ ಇನ್ನು ಮುಂದೆ ನಡೆಯುವುದಕ್ಕೇ ಸಾಧ್ಯವಿಲ್ಲ ಎಂಬ ನೋವು ಕಾಣಿಸಿತು. ತುಂಬಾ ಹೊತ್ತು ನಿಂತು ದೀರ್ಘ ಉಸಿರೆಳೆದು ಬಿಟ್ಟು ಇತ್ಯಾದಿ ಮಾಡಿದ ಮೇಲೆ ನೋವು ಹೋಯಿತೆಂದು ಮತ್ತೆ ನಡೆದರೆ ನಾಲ್ಕು ಹೆಜ್ಜೆ ಹೋಗುವುದರೊಳಗೆ ಪುನಃ ನೋವು ಕಾಣಿಸಿತು. ವಾಕನ್ನು ಅವತ್ತು ಅಲ್ಲಿಗೇ ನಿಲ್ಲಿಸಿ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಂಡೆ. ಮಾರನೇ ದಿನ ಸುಳ್ಯಕ್ಕೆ ಬ್ಯಾಂಕಿಗೆ ಹೋಗಲೆಂದು ಸ್ನಾನ ಮಾಡುವಾಗ ಮತ್ತೆ ನೋವು ಪ್ರಾರಂಭವಾದದ್ದು ತುಂಬಾ ಹೊತ್ತು ಇತ್ತು. ಮತ್ತೆ ಇಡೀ ದಿನ ವಿಶ್ರಾಂತಿ ತೆಗೆದುಕೊಳ್ಳಬೇಕಾಯಿತು. ಕೆಲವು ದಿನದ ಬಳಿಕ ಏನೇಕಲ್ಲಿನಲ್ಲಿ ಒಂದು ಸಮಾರಂಭಕ್ಕ ಹೋದವನಿಗೆ ಸಮಾರಂಭದ ಮಧ್ಯೆ ನೋವು ಕಾಣಿಸಿ ಇಲ್ಲೇ ಇದ್ದ ಮಿತ್ರ ಪ್ರಭಾಕರ ಶಿಶಿಲರಿಗೆ ತಿಳಿಸಿ ಅವರು ಊರಿನ ಬೇರೊಬ್ಬರಿಗೆ ತಿಳಿಸಿ ಹತ್ತಿರದ ಸುಬ್ರಹ್ಮಣ್ಯದ ಒಬ್ಬರು ಡಾಕ್ಟರ ಹತ್ತಿರ ಕರೆದುಕೊಂಡರು. ಅವರು ನೈಟ್ರೋಫಿಕ್ಸ್ 20 ಎಂಬ ಮಾತ್ರೆ ಕೊಟ್ಟರು. ಸ್ವಲ್ಪ ಹೊತ್ತಾದ ಮೇಲೆ ನೋವು ನಿಂತಿತು. ಅವರು ಈ ಮಾತ್ರೆ ದಿನಕ್ಕೆ ಎರಡು ಬೆಳಿಗ್ಗೆ ರಾತ್ರಿ ತಿನ್ನಲು ಮತ್ತು ಬೆಂಗಳೂರಿನ ನನ್ನ ಡಾಕ್ಟರ ಹತ್ತಿರ ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿದರು. ಏನೇ ಇದ್ದರೂ ಏಂಜಿಯೋಗ್ರಾಂ ಮಾಡುವುದು ಅನಿವಾರ್ಯ ಎಂದರು. ಇದೂ invasive surgeryಯೇ.

ಅವರು ಕೊಟ್ಟ ನೈಟ್ರೋಫಿಕ್ಸ್ 20 ಸಾರ್ಬಿಟ್ರಾಟ್ ತರದ್ದೇ ಮಾತ್ರೆ. ಆದರೆ ಹೆಚ್ಚು ಹೊತ್ತು ಪರಿಣಾಮ ಇರುತ್ತದೆ. ತಿಂದಾಗ ನೋವು ಹೋದರೂ ರಾತ್ರಿ ಇದ್ದಕ್ಕಿದ್ದಂತೆ ನೋವು ಪ್ರಾರಂಭವಾಗಿ ಎಚ್ಚರವಾಗುತ್ತಿತ್ತು. ಮತ್ತೆ ಈ ಮಾತ್ರೆ ತಿಂದ ಮೇಲೇ ನೋವು ಶಮನಿಸುತ್ತಿತ್ತು. ಮೊದಲು ನಡೆಯುವಾಗ ಅಥವಾ ಬೇರೆ ರೀತಿಯಲ್ಲಿ ದಣಿವಾದಾಗ ಬರುತ್ತಿದ್ದ ನೋವು ಈಗ ಮಲಗಿದಾಗಲೇ ನಿದ್ದೆಯಲ್ಲಿದ್ದಾಗಲೇ ಬರುತ್ತಿತ್ತು. ನನ್ನ ಪ್ರಿಯ ಮಿತ್ರರೂ ಹಿತೈಷಿಯೂ ಆದ ಶಿವಮೊಗ್ಗದ ಪ್ರಖ್ಯಾತ ವೈದ್ಯ ಯು. ಆರ್. ಅನಿಲ ಕುಮಾರ್ ಗೆ ಈ ವಿಷಯ ತಿಳಿಸಿ ಸಲಹೆ ಕೇಳಿದೆ. ಅವರಿಗೆ ನನಗೆ ಹಿಂದೆ ಆಪರೇಷನ್ ಆದದ್ದು ಇತ್ಯಾದಿ ಗೊತ್ತಿದೆ. ಆವರು ಮತ್ತೆ ಆರ್ಟರಿಗಳು ಬ್ಲಾಕ್ ಆಗಿವೆಯೆಂದೂ ನಾನು ಆದಷ್ಟು ಬೇಗ ಬೆಂಗಳೂರಿಗೆ ಹೋಗಿ ವೋಕ್ಹಾರ್ಟಿನ ಡಾ. ವಿವೇಕ ಜವಳಿಯವರನ್ನು ಭೇಟಿ ಮಾಡಿ ಕನ್ಸಲ್ಟ್ ಮಾಡಬೇಕೆಂದೂ ತಿಳಿಸಿದರು.

ನನಗೆ ಮತ್ತೆ ಈ ಆಸ್ಪತ್ರೆ ವಾಸ, ಆಪರೇಷನ್ ಇತ್ಯಾದಿ ಬೇಡ ಅನ್ನಿಸಿತು. ಅದರ ಪರಿಣಾಮ ನಾಕೈದು ವರ್ಷ ಮಾತ್ರ. ಅದೊಂದು ತಾತ್ಕಾಲಿಕ ಪರಿಹಾರ. ಅದರ ಬದಲಾಗಿ ಪರ್ಯಾಯ ವೈದ್ಯ ಪದ್ಧತಿಯಲ್ಲಿ ಏನಿದೆ ಎಂದು ಹುಡುಕಿದೆ. Dr. Dean Ornish`s Program for Reversing Heart Disease ಎಂಬ ಡಾ. ಡೀನ್ ಆರ್ನಿಶ್ ನ ಪುಸ್ತಕ ನನ್ನ ಹತ್ತಿರ ಅನೇಕ ವರ್ಷಗಳಿಂದ ಇದೆ. ಅದರಲ್ಲಿ ಅವನು ಆಪರೇಷನ್ ಇಲ್ಲದೆ ಔಷಧಿ ಇಲ್ಲದೆ ಹೃದ್ರೋಗ ಹೇಗೆ ಗುಣಪಡಿಸಬಹುದು ಎಂಬುದಕ್ಕೆ ಅನೇಕ ಟಿಪ್ಸ್ ಕೊಡುತ್ತಾನೆ. ಅದು ಗೊತ್ತಿದ್ದರೂ ನಾನು ಅದನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಕಾಫಿ ಕುಡಿಯುವುದನ್ನು ಬಿಡುವುದಾಗಲೀ ಕರಿದ ತಿಂಡಿಯ ಮೋಹ ತೊರೆಯುವುದಾಗಲೀ ನನಗೆ ಆಗಿರಲಿಲ್ಲ. ಇನ್ನು ಇವನ್ನು ನಿಷ್ಠೆಯಿಂದ ಪಾಲಿಸಿ ನೋಡುವುದು ಎಂದು ನಿರ್ಧರಿಸಿದೆ. ಆದರೆ ಅದೆಲ್ಲಾ ಸಮಯ ಹಿಡಿಯುವ ವಿಧಾನ. ಅಷ್ಟರ ವರೆಗೆ ಈ ನೈಟ್ರೋಫಿಕ್ಸ್ ಅನ್ನೇ ಅವಲಂಬಿಸಿಬೇಕು.

ಮಾರನೇ ದಿನ ಈ ಡಾ. ಆರ್ನಿಶ್ ವಿಟಮಿನ್ನುಗಳ ಬಗ್ಗೆ ಏನು ಹೇಳುತ್ತಾನೆ ನೋಡಬೇಕು ಅನ್ನಿಸಿತು. ಅವನು ಅದರ ಬಗ್ಗೆ ವಿಶೇಷ ಏನೂ ಹೇಳುವುದಿಲ್ಲ. ಹಾಗಾದರೆ ಇಂಟರ್ನೆಟ್ಟಲ್ಲಿ ಏನಿದೆ ಎಂದು ಹುಡುಕಿದಾಗ ನನಗೆ ಲೈನಸ್ ಪಾಲಿಂಗ್ ನ ಕೆಲಸದ ಪರಿಚಯ ಆದದ್ದು. ಅಮೆರಿಕಾದಲ್ಲಿ Vitamin C Foundation ಎಂಬ ಒಂದು ಪ್ರತಿಷ್ಠಾನ ಕೂಡಾ ಇದೆ. ಅದರಲ್ಲಿ ವಿಟಮಿನ್ ಸಿಯಿಂಧಾಗಿ ಗುಣಮುಖರಾದವರ ಕೆಲವು ವಿವರಗಳಿವೆ. ಮರಣಾಂತಿಕ ಸ್ಥಿತಿಯಲ್ಲಿದ್ದು ಗುಣಮುಖನಾದ ಒಬ್ಬನ ಕುರಿತ ವಿಡಿಯೋ ಕೂಡಾ ಇದೆ.

ನಾನು ವಿಟಮಿನ್ ಸಿ ತಿನ್ನಲು ಪ್ರಾರಂಭಿಸಿದ್ದು ಫೆಬ್ರುವರಿ 4ರಂದು--ಎಂಟು ದಿನಗಳ ಹಿಂದೆ. ಡಾ. ಪಾಲಿಂಗ್ ದಿನಕ್ಕೆ ಕನಿಷ್ಠ ಆರು ಗ್ರಾಂ ವಿಟಮಿನ್ ಸಿ ತಿನ್ನಬೇಕು ಮತ್ತು ಲೈಸಿನ್ ಅಥವಾ ಅಮಿನೋ ಏಸಿಡ್ ತಿನ್ನಬೇಕು ಅನ್ನುತ್ತಾನೆ. ಅಮಿನೋ ಆಸಿಡ್ ಇರುವ ಮಲ್ಟಿವಿಟಮಿನ್ ತಿನ್ನಲು ಪ್ರಾರಂಬಿಸಿದೆ. ಆದರೆ  ವಿಟಮಿನ್ ಸಿ ದಿನಕ್ಕೆ ಮೂರು ಗ್ರಾಂನಂತೆ ತಿನ್ನುತ್ತಿದ್ದೆ. ಎಂಟನೇ ತಾರೀಕಿನಿಂದ ಅವನು ಹೇಳಿದಂತೆ 6 ಗ್ರಾಂ-- ಸರ್ತಿಗೆ 1 ಗ್ರಾಂನಂತೆ ದಿನಕ್ಕೆ ಆರು ಸಲ-- ತಿನ್ನಲು ಪ್ರಾರಂಬಿಸಿದೆ. ಮೊನ್ನೆ 10ನೇ ತಾರೀಕಿನ ಹೊತ್ತಿಗೆ ನೋವು ಸಾಕಷ್ಟು ಕಮ್ಮಿಯಾಯಿತು. ನಿನ್ನೆ 11ನೇ ತಾರೀಕು ನನ್ನ ತೋಟದ ಡೀಸೆಲ್ ಪಂಪನ್ನು ಎರಡು ಸಲ ಸ್ಟಾರ್ಟ್ ಮಾಡಿದೆ. ಡಿಸೆಲ್ ಪಂಪನ್ನು ಹ್ಯಾಂಡ್ಲ್ ಹಾಕಿ ತಿರುಗಿಸಿ ಸ್ಟಾರ್ಟ್ ಮಾಡಬೇಕು. ಸುಮಾರು 20 ನಿಮಿಷಗಳ ಕಾಲ ನೋವಿಲ್ಲದೆ ಕೆಲಸ ಮಾಡುವುದು ಸಾಧ್ಯವಾಯಿತು. ಆ ಬಳಿಕ ನೋವು ಸುರುವಾಯಿತು. ವಿಶ್ರಾಂತಿ ಪಡೆದಾಗ ಮೊದಲಿಗಿಂತ ಎಷ್ಟೋ ಬೇಗ ನಿಂತಿತು.

ವಿಟಮಿನ್ ಸಿಗೆ ಸಂಬಂಧಿಸಿದ ಲೇಖನದಲ್ಲಿ ಹೀಗೆ ಬೇಗ ಗುಣ ಕಾಣುತ್ತದೆ ಎಂದು ಬರೆದಿದ್ದಾರೆ. ಆದರೆ ಪೂರ್ತಿ ಗುಣವಾಗಲು ಒಂದರಿಂದ ಆರು ತಿಂಗಳು ಬೇಕಾಗುತ್ತದೆ ಎಂದಿದೆ. ನನ್ನ ಹಾಗೆ ನೋವಿನಿಂದ ಯಾತನೆ ಪಡುವವರು ಇದ್ದರೆ ವಿಟಮಿನ್ ಸಿಯಿಂದ ಪ್ರಯೋಜನ ಪಡೆಯಲು ಬಯಸಿದರೆ ಹಾಗೆ ಮಾಡಲಿ ಎಂಬ ದೃಷ್ಟಿಯಿಂದ ಇದನ್ನಿಲ್ಲಿ ಈಗಲೇ ಬರೆದಿದ್ದೇನೆ. ವಿಟಮಿನ್ ಸಿ ಮತ್ತು ಎಮಿನೋ ಏಸಿಡ್ ಇರುವ ಮಲ್ಟಿವಿಟಮಿನ್ನುಗಳು ಎಲ್ಲಾ ಔಷಧಿ ಅಂಗಡಿಗಳಲ್ಲಿ ಸಿಗುತ್ತವೆ. 500 mg ಒಂದು ವಿಟಮಿನ್ ಸಿ ಮಾತ್ರೆಯ ಬೆಲೆ ಒಂದು ರೂಪಾಯಿ.

ಉಳಿದವರಿಗೂ ವಿಟಮಿನ್ ಸಿಯಿಂದ ನನಗೆ ಆಗುತ್ತಿರುವ ಪ್ರಯೋಜನ ಆದಲ್ಲಿ ಹೃದ್ರೋಗವನ್ನು ಮನುಕುಲದಿಂದಲೇ ಅಟ್ಟಿಬಿಡಬಹುದು.