Saturday, January 28, 2012

ಅತ್ರಿ ಬುಕ್ ಸೆಂಟರ್

ಅತ್ರಿ ಬುಕ್ ಸೆಂಟರ್ ಮುಚ್ಚುವ ನಿರ್ಧಾರವನ್ನು ಅದರ ಮಾಲೀಕ ಅಶೋಕ ವರ್ಧನ ತೆಗೆದುಕೊಂಡಿದ್ದಾರೆ. ಚೆನ್ನಾಗಿ ಬದುಕಿದವನಿಗೆ ಮಾತ್ರ ಅದನ್ನು ಬಿಟ್ಟುಕೊಡಲು ಹೆದರಿಕೆಯಿರುವುದಿಲ್ಲ ಎಂಬ ಒಂದು ಮಾತಿದೆ. ಹಾಗೆ ಚೆನ್ನಾಗಿ ಈ ಪುಸ್ತಕದಂಗಡಿ ನಡೆಸಿದ ಅಶೋಕ್ ಗೆ ಅದನ್ನು ಮುಚ್ಚುವ ಹೆದರಿಕೆ ಇಲ್ಲ. ಬೇಡ, ಇನ್ನು ಇದರಲ್ಲಿ ಸ್ವಾರಸ್ಯ ಇಲ್ಲ ಅನ್ನಿಸಿದಾಗ ಅವರು ಅದನ್ನು ಮುಚ್ಚಿ ತಮ್ಮ ಜೀವನ ಬೇರೆ ಯಾವ ರೀತಿ ಸೃಜನಶೀಲ ಆಗಬಹುದು ಎಂದು ಹುಡುಕಲು ಹೊರಟಿದ್ದಾರೆ. ಅನೇಕರು ಇಂಥಾ ಸಂದರ್ಭದಲ್ಲಿ ಮಾಡುವ ಹಾಗೆ ಅಷ್ಟು ಪ್ರಮುಖ ಸ್ಥಳದಲ್ಲಿರುವ ಆ ಜಾಗದಲ್ಲಿ ಹೆಚ್ಚು ಲಾಭ ಬರಬಹುದಾದ ಹಾರ್ಡ್ ವೇರ್ ಶಾಪು ಅಥವಾ ಐಸ್ ಕ್ರೀಂ ಪಾರ್ಲರ್ ಇತ್ಯಾದಿ ತೆರೆಯಲು ಅವರು ಹೊರಟಿಲ್ಲ. ತಮ್ಮ ಕನ್ವಿಕ್ಷನ್ನಿಗೆ ಅನುಗುಣವಾಗಿ ಮುಚ್ಚುವಾಗಲೂ ನಡೆದುಕೊಳ್ಳುತ್ತಿದ್ದಾರೆ. ಅವರಿಗೆ ಶುಭಾಶಯಗಳು.

ಅತ್ರಿ ಬುಕ್ ಸೆಂಟರ್ ಬರೀ ಪುಸ್ತಕದ ಅಂಗಡಿ ಮಾತ್ರ ಆಗಿರಲಿಲ್ಲ. ಅದರಲ್ಲಿನ ಪುಸ್ತಕಗಳ ಆಯ್ಕೆ  ಅದರ ಮಾಲೀಕರ ಅಭಿರುಚಿಯನ್ನು ಬಿಂಬಿಸುತ್ತಿತ್ತು. ಅಲ್ಲಿ ನೋಟುಪುಸ್ತಕಗಳು, ಪೆನ್ನು ಪೆನ್ಸಿಲ್ಲು ಮೊದಲಾದ ಸುಲಭಕ್ಕೆ ಲಾಭ ಬರುವ ಸಾಮಗ್ರಿ ಇಟ್ಟಿರಲಿಲ್ಲ. ಪಂಚಾಗ ಮೊದಲಾದವೂ ಇಡುತ್ತಿರಲಿಲ್ಲ. ಹೋದಾಗ ಸಾಹಿತ್ಯ ಮೊದಲಾದ ಅನೇಕ ವಿಷಯಗಳ ಬಗ್ಗೆ ಅಲ್ಲಿ ಮಾತಾಡಲು ಆಗುತ್ತಿತ್ತು. ಸ್ವತಃ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವೀಧರರಾದ ಅವರು ಸಾಹಿತ್ಯದ ಅನೇಕ ಸೂಕ್ಷ್ಮಗಳನ್ನು ಬಲ್ಲವರಾಗಿದ್ದರು. ಹೀಗಾಗಿಯೇ ಪುಸ್ತಕ ಕೊಳ್ಳುವುದರ ಜೊತೆಗೆ ಅವರನ್ನು ಮಾತಾಡಿಸಿಬರಬಹುದೆಂಬುದು ಸಹಾ ಅತ್ರಿಗೆ ಹೋಗಲು ಇದ್ದ ಒಂದು ಕಾರಣವಾಗಿತ್ತು.

ಪುಸ್ತಕ ವ್ಯಾಪಾರದಲ್ಲಿ ಪುಸ್ತಕ ತರಿಸಿ ಮಾರಾಟ ಮಾಡಿ ಪ್ರಕಾಶಕರಿಗೆ ಹಣ ಕೊಡದವರು ತುಂಬಾ ಜನ ಇರುತ್ತಾರೆ. ಪ್ರಕಾಶನದಲ್ಲಿ ನಷ್ಟವಾಗುವುದೇ ಹೀಗೆ  ಕೈಕೊಡುವ ಪುಸ್ತಕ ವ್ಯಾಪಾರಿಗಳಿಂದ. ಅಶೋಕರ ಪ್ರಾಮಾಣಿಕ ವ್ಯವಹಾರ, ತರಿಸಿಕೊಂಡ ಪುಸ್ತಕಗಳಿಗೆ ಸೋಡಿ ಕಳೆದು ಕೂಡಲೇ ಹಣ ಕೊಡುವ ಕ್ರಮ ಅವರನ್ನು ಅತ್ಯಂತ ಗೌರವಾನ್ವಿತ ಪುಸ್ತಕ ವ್ಯಾಪಾರಿಯನ್ನಾಗಿ ಮಾಡಿವೆ. ಆದ್ದರಿಂದಲೇ ಅವರು ಅಂಗಡಿ ಮುಚ್ಚುತ್ತೇನೆ ಎಂದಾಗ ನನಗೆ ಒಂದು ದೊಡ್ಡ ಮೌಲ್ಯದ ಜೀವಂತ ರೂಪ ಮರೆಗೆ ಸರಿಯುತ್ತಿದೆ ಅನ್ನಿಸಿತು.

ನನಗೆ ಅಶೋಕರ ಪರಿಚಯ ನಾಲ್ಕು ದಶಕಗಳಿಗೂ ಹಿಂದಿನದು. ನಾನು 1971ರ ಹೊತ್ತಿಗೆ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದಾಗ ಸರಸ್ವತೀಪುರಂ ನ ಆರನೇ ಮೇನಿನಲ್ಲಿ ವಾಸವಾಗಿದ್ದೆ. ಆಗ ಕಾಲೇಜು ವಿದ್ಯಾರ್ಥಿಯಾಗಿದ್ದ ಅವರು ನನ್ನನ್ನು ಗಮನಿಸಿದ್ದರಂತೆ. ನನಗೆ ಅವರ ನಿಕಟ ಪರಿಚಯವಾಗಲು ಸುರುವಾದದ್ದು ನಾನು ಲೈಬ್ರೆರಿ ಅಫ್ ಕಾಂಗ್ರೆಸ್ ಪರವಾಗಿ ಪುಸ್ತಕ ಕೊಳ್ಳಲು ಮಂಗಳೂರಿಗೆ ಪ್ರವಾಸ ಬರಲು ಪ್ರಾರಂಭಿಸಿದ ಮೇಲೆ. ಆ ರಿಸರ್ಚ್ ಲೈಬ್ರೆರಿಗೆ ಬೇಕಾದ ಅತ್ಯಂತ ಹೆಚ್ಚು ಸಂಖ್ಯೆಯ ಪುಸ್ತಕಗಳನ್ನು ಕೊಳ್ಳುತ್ತಿದ್ದ ಅಂಗಡಿಗಳಲ್ಲಿ ಅತ್ರಿ ಒಂದು. ಆನಂತರ ಪ್ರಕಾಶಕನಾದ ಮೇಲೂ ಅವರ ನನ್ನ ಸಂಬಂಧ ತುಂಬಾ ಚೆನ್ನಾಗಿ ನಡೆದಿದೆ. ರಥಮುಸಲ ಪಠ್ಯಪುಸ್ತಕವಾದಾಗ ಅವರು ಇದ್ದದ್ದರಿಂದ ನನಗೆ ಅದನ್ನು ಸರಿಯಾಗಿ ತಲೆ ಬಿಸಿ ಇಲ್ಲದಂತೆ ವಿತರಿಸಿಕೊಳ್ಳಲು ಸಾಧ್ಯವಾಯಿತು.

ಕೆಲವು ಪುಸ್ತಕದ ಅಂಗಡಿಗಳು ನನಗೆ ಪ್ರಿಯವಾದವು. ದೆಹಲಿಯಲ್ಲಿ ರಾಮಕೃಷ್ಣ ಬುಕ್ ಸ್ಟಾಲ್ ಹೀಗೆ ಪ್ರಿಯವಾಗಿತ್ತು. ಅನೇಕ ವರ್ಷಗಳ ಹಿಂದೆಯೇ ಅದನ್ನು ಮುಚ್ಚಿ ಬಟ್ಟೆ ಅಂಗಡಿಯನ್ನಾಗಿ ಪರಿವರ್ತಿಸಿದರು. ಬಟ್ಟೆ ಅಂಗಡಿ ಆದದ್ದನ್ನು ಮೊದಲ ಸಲ ನೋಡಿದಾಗ, ನನಗೆ ಆಗ ಒಂದು ಶರ್ಟು ಕೊಂಡುಕೊಳ್ಳುವ ಅಗತ್ಯ ಇದ್ದಿದ್ದರೂ ಯಾಕೋ ಅಲ್ಲಿ ಕೊಳ್ಳಬೇಕು ಅನ್ನಿಸಲಿಲ್ಲ. ಬೆಂಗಳೂರಿನ ಪ್ರೀಮಿಯರ್ ಕೂಡಾ ಒಂದು ಸಾಂಸ್ಕೃತಿಕ ಕೇಂದ್ರವಾಗಿದ್ದದ್ದು. ಅದೂ ಸುಮಾರು ಮೂರು ವರ್ಷಗಳ ಕೆಳಗೆ ಮುಚ್ಚಿತು. ಅದರ ಮಾಲೀಕರಾದ ಶಾನುಭೋಗ್ ಇದನ್ನು ಓದಿ, ಚೆನ್ನಾಗಿದೆ ಎಂದು ಹೇಳಬಲ್ಲಷ್ಟು ತಿಳಿದಿದ್ದವರು. ಇನ್ನೊಂದು ಪುಸ್ತಕದ ಅಂಗಡಿ ಸಿಲೆಕ್ಟ್ ಬುಕ್ ಶಾಪ್. ಇದು ಸೆಕೆಂಡ್ ಹ್ಯಾಂಡ್ ಬುಕ್ ಶಾಪು. ಈಗಲೂ ನಡೆಯುತ್ತಿದೆ. ಅತ್ಯಂತ ಅಪರೂಪದ ಪುಸ್ತಕಗಳು ಸಿಗುವ ಅಂಗಡಿ ಅದು. ಅವರಿಂದಾಗಿ ನನಗೆ ಬೇರೆ ರೀತಿಯಲ್ಲಾದರೆ ಓದಲು ಸಾಧ್ಯವಾಗದಿದ್ದ ಕೆಲವು ಪುಸ್ತಕಗಳನ್ನು ಓದಲು ಸಾಧ್ಯವಾಗಿದೆ. ಯಾರೂ ಇಲ್ಲದಿದ್ದಾಗ ಡ್ರಾಯರಿನ ಮೂಲೆಯಿಂದ ಒಂದು ಅಪರೂಪದ ಪುಸ್ತಕ ತೆಗೆದು ಕಳ್ಳನಗೆಯಿಂದ ಅದನ್ನು ಅಲ್ಲಿನ ಮಾಲೀಕ ಕೆ. ಕೆ. ಮೂರ್ತಿ ನನಗೆ ಕೊಟ್ಟಿದ್ದಾರೆ.

ಇವರೆಲ್ಲರೂ ಪುಸ್ತಕದ ಅಂಗಡಿ ಮುಚ್ಚಿದರೂ ಸಮಾನ ಆಸಕ್ತಿಗಳಿಂದಾಗಿ ಸ್ನೇಹಿತರಾಗಿ ಮುಂದುವರಿಯುವವರು.

ಅಶೋಕರ ಭವಿಷ್ಯ ಇದು ವರೆಗಿನಷ್ಟೇ ಯಶಸ್ವಿಯಾಗಿರಲಿ ಎಂದು ಹಾರೈಸುತ್ತೇನೆ.

Wednesday, January 25, 2012

ತುಳುವ ಪತ್ರಿಕೆ

ತುಳುವ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹೊರ ತರುತ್ತಿರುವ ತ್ರೈಮಾಸಿಕ. ಇದರ ಪ್ರಧಾನ ಸಂಪಾದಕರು ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾದ ಪ್ರೊ. ಎಚ್. ಕೃಷ್ಣ ಭಟ್ಟ ಅವರು. ಅವರ ಜೊತೆಗೆ ಸಂಪಾದಕ ಮಂಡಲಿಯಲ್ಲಿರುವವರು ಡಾ. ಎನ್. ತಿರುಮಲೇಶ್ವರ ಭಟ್ಟ, ಪ್ರೊ. ಮುರಳೀಧರ ಉಪಾಧ್ಯ, ಎಸ್. ಎ. ಕೃಷ್ಣಯ್ಯ, ಅಶೋಕ ಆಳ್ವ, ಮತ್ತು ಪಾದೇಕಲ್ಲು ವಿಷ್ಣು ಭಟ್ಟ. ನಿಯತವಾಗಿ, ಚಿತ್ರ, ವಿಮರ್ಶಾತ್ಮಕ/ಸಂಶೋಧನ ಲೇಖನಗಳಿಂದ ಕೂಡಿ ಚೆಂದಕ್ಕೆ ಬರುತ್ತಿರುವ ಪತ್ರಿಕೆ ಇದು. ವಿಮರ್ಶೆಗಿಂತ ಎನೆಕ್ಡೋಟುಗಳು, ಸಂಶೋಧನೆಗಿಂತ ರೂಮರುಗಳು ಪ್ರಿಯವಾಗುತ್ತಿರುವ ಇಂದಿನ ದಿನಗಳಲ್ಲಿ ಸಂಶೋಧನೆಗೇ ಒತ್ತು ಕೊಡುವ ಈ ಪತ್ರಿಕೆ ಅಪರೂಪದ್ದೂ ಪ್ರೋತ್ಸಾಹಕ್ಕೆ ಅರ್ಹವಾದದ್ದೂ ಆಗಿದೆ.

ಹೆಸರು ತುಳುವ ಆಗಿದ್ದರೂ ಇಲ್ಲಿನ ಅನೇಕ ಲೇಖನಗಳು ಒಟ್ಟು ಕನ್ನಡ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಉದಾಹರಣೆಗೆ ಈ ಸಲದ ಸಂಚಿಕೆಯಲ್ಲಿ ಇರುವ ಎನ್. ಪಿ. ಶೆಟ್ಟಿ ಬರೆದಿರುವ ಮುಳಿಯ ತಿಮ್ಮಪ್ಪಯ್ಯನವರ ಕವಿರಾಜಮಾರ್ಗ ವಿವೇಕ ಕುರಿತ ಲೇಖನ ನೋಡಿ. ಈ ಲೇಖನ ನೋಡಿದ ಮೇಲೆ ಮುಳಿಯರ ಆ ಪುಸ್ತಕ ಹುಡುಕಿಕೊಂಡು ಹೋಗಿ ಓದಬೇಕು ಅನ್ನಿಸಿತು. ಹಾಗೆಯೇ ಕವಿ ಕಣವಿಯವರ ಗದ್ಯ ಸಂಪುಟ ಕುರಿತು ಎಂ. ರಾಮಚಂದ್ರರ ಭಾಷಣದ ಲಿಖಿತ ರೂಪ ಉಪಯುಕ್ತವಾಗಿದೆ.

ಕವಿರಾಜ ಮಾರ್ಗದ ಕಾಲ ಕನ್ನಡಿಗರು ಸಾಮ್ರಾಜ್ಯ ಕಟ್ಟಿದ ಕಾಲ. ಸಾಮ್ರಾಟರ ಮಂಡೆ ಅವರು ಬ್ರಿಟಿಷರಿರಲಿ ಅಮೆರಿಕನ್ನರಿರಲಿ ಕನ್ನಡಿಗರಿರಲಿ ಯಾವಾಗಲೂ ಒಂದೇ ನಮೂನೆ ಇರುತ್ತದಾದರೂ ಕನ್ನಡಿಗರು ಅಸ್ಮಿತೆ ಪಡೆಯುತ್ತಿರುವ ಈ ಕಾಲದಲ್ಲಿ ನಮ್ಮ ಹಿರಿಯರು ಎರಡು ಸಲ ಅಖಿಲ ಭಾರತ ಮಟ್ಟದಲ್ಲಿ ಸಾಮ್ರಾಜ್ಯ ಕಟ್ಟಿದರು ಎನ್ನುವುದು ನೆನಪಿಗೆ ತಂದುಕೊಳ್ಳಬೇಕಾದ ವಿಷಯವಾಗಿದೆ. ಈ ದೃಷ್ಟಿಯಿಂದ ಕವಿರಾಜ ಮಾರ್ಗ ಮತ್ತೆ ಮತ್ತೆ ಚರ್ಚಿಸಬೇಕಾದ ಕೃತಿ.

ಜೊತೆಗೆ ಗೋವಿಂದ ಪೈ ಸಂಶೋಧನ ಕೇಂದ್ರ ಎಷ್ಟು ಮುಖ್ಯ ಮತ್ತು ಉಪಯುಕ್ತ ಕೆಲಸಗಳನ್ನು ಮಾಡುತ್ತಿದೆ ಎಂಬ ವಿವರಗಳು ನಮಗೆ ಈ ಪತ್ರಿಕೆಯಿಂದ ಸಿಗುತ್ತವೆ.

ಮೇಲಿನ ಚಿತ್ರ 2011ರಲ್ಲಿ ಶಿವರಾಮ ಕಾರಂತರ ಜನ್ಮದಿನದ ಕಾರ್ಯಕ್ರಮದ ಅಂಗವಾಗಿ ನಡೆದ ಕಲಾಶಿಬಿರದಲ್ಲಿ ಬಿಡಿಸಲಾದ ಚಿತ್ರ. ಇದು ಮತ್ತು ಕೆಳಗಿನ ಚಿತ್ರಗಳನ್ನು ನೋಡಿದಾಗ, ಅರೇ, ಕಾರಂತರ ಅನೇಕ ಪಾತ್ರಗಳು ಸುಮಾರು ಹೀಗೇ ಇದ್ದಾವಲ್ಲ, ಅವರ ಕಾದಂಬರಿಗಳನ್ನು ಓದುವಾಗ ನಾನು ಆ ಪಾತ್ರಗಳನ್ನು ಕಲ್ಪಸಿಕೊಂಡದ್ದು ಹೆಚ್ಚು ಕಡಿಮೆ ಹೀಗೇ ಅಲ್ಲವೇ ಅನ್ನಿಸಿತು.
************************


Friday, January 20, 2012

ಬೇರೆ ಬೇರೆ ಕಾರಣಗಳಿಂದಾಗಿ ನನಗೆ ಇತ್ತೀಚೆಗೆ ಸರಿಯಾಗಿ ಬ್ಲಾಗ್ ಪ್ರಕಟಿಸಲು ಆಗಲಿಲ್ಲ. ಕೆಲವು ದಿವಸ ಇಂಟರ್ನೆಟ್ ಹಾಳಾಗಿತ್ತು. ಆ ಮೇಲೆ ಡಿಸೆಂಬರಿನಿಂದ ಜನವರಿ ಹದಿನೈದರ ವರೆಗೂ ಹೆಚ್ಚಿನ ದಿನ ನನ್ನ ನಾಟಕಗಳನ್ನು ಇಂಗ್ಲಿಷಿಗೆ ಅನುವಾದಿಸುವುದರಲ್ಲಿ ಕಳೆದೆ. ರಥಮುಸಲ ಮತ್ತು ಕುದುರೆ ಬಂತು ಕುದುರೆಗಳನ್ನು ಹಿಂದೆಯೇ ಅನುವಾದಿಸಿ ಇಟ್ಟಿದ್ದೆ. ಎಷ್ಟು ಹಿಂದೆ ಎಂದರೆ ಕೈಬರೆಹದಲ್ಲಿ ಅನುವಾದಿಸಿದ್ದ ಅದರ ಹಾಳೆಗಳೆ ಹಳದಿಗೆ ತಿರುಗಿದ್ದವು. ಅವನ್ನು ತಿದ್ದಿ ಕಂಪ್ಯೂಟರಿನಲ್ಲಿ ಮತ್ತೆ ಟೈಪು ಮಾಡಿ ಮತ್ತೆ ತಿದ್ದಿದೆ. ಜೊತೆಗೆ ಹುಲಿಯ ಕಥೆ ಹಾಗೂ ರಾಹು ಮತ್ತು ಕೇತುಗಳನ್ನು ಅನುವಾದಿಸಿದೆ. ಇನ್ನೂ ಏಳು ನಾಟಕಗಳು ಅನುವಾದ ಆಗಬೇಕಾದ್ದಿದೆ. ಅವುಗಳಲ್ಲಿ ಡಾಗ್ ಶೋ ಮತ್ತು ಜರಾಸಂಧ ಕನ್ನಡ ಭಾಷೆಯ ನಾಟಕಗಳು. ಕನ್ನಡ ಬಾಷೆಯ ಲಯವಲ್ಲದೆ ಇಂಗ್ಲಿಷಿನಲ್ಲಿ ಅವನ್ನು ಬರೆಯಬಲ್ಲೆ ಅನ್ನಿಸುವುದಿಲ್ಲ. ಉಳಿದ ಐದು ನಾಟಕಗಳನ್ನು ಹೀಗೇ ಒಂದೆರಡು ತಿಂಗಳು ಕೂತು ಅನುವಾದಿಸಬೇಕು. ಈ ನಾಟಕಗಳ ಅನುವಾದವೂ ಡಿಸೆಂಬರಿನೊಳಗೆ ಮುಗಿಯಬಹುದು ಅಂದುಕೊಂಡಿದ್ದರೆ ಮುಗಿಯದೆ ನಲುವತ್ತೈದು ದಿನ ಹಿಡಿಯಿತು. ಆದರೆ ಬೇರೆಯೆವರು ಅನುವಾದಿಸುವುದಕ್ಕಿಂತ ನಮ್ಮ ಕೃತಿಗಳನ್ನು ನಾವೇ ಅನುವಾದಿಸುವುದು ಒಳ್ಳೆಯದೆಂದು ನನ್ನ ಅಭಿಪ್ರಾಯ.

ಜೊತೆಗೆ ನನ್ನ ಸಮಗ್ರ ಕಥೆಗಳು--1 ಮುದ್ರಣದ ವ್ಯವಸ್ಥೆ ಮಾಡಬೇಕಿತ್ತು. ಅದು ಈಗ ಮುದ್ರಣವಾಗಿ ಬಂದಿದೆ. ಬೇಕಾದವರು ಆನ್ ಲೈನ್ ಮೂಲಕ ತರಿಸಿಕೊಂಡರೆ, ಅಥವಾ ಬೇರೆ ಯಾವುದೇ ರೀತಿಯಲ್ಲಿ ನೇರ ಬೋಧಿ ಟ್ರಸ್ಟ್ ನಿಂದ ತರಿಸಿಕೊಂಡರೆ ಅನುಕೂಲ. ಅನೇಕ ಪುಸ್ತಕ ವ್ಯಾಪಾರಿಗಳಲ್ಲಿ ನಮ್ಮ ಪುಸ್ತಕ ಸಿಕ್ಕಲಾರದು. ಅತ್ರಿಯ ಅಶೋಕವರ್ಧನರಂತೆ ಪ್ರಾಮಾಣಿಕವಾಗಿ ವ್ಯವಹರಿಸುವವರು ಕಮ್ಮಿ ಜನ. ಹೀಗಾಗಿ ಪುಸ್ತಕ ವ್ಯಾಪಾರಿಗಳಿಗೆ ಪುಸ್ತಕ ಕಳಿಸುವ ಮೊದಲು ಜಾಗ್ರತೆ ವಹಿಸಬೇಕಾಗುತ್ತದೆ. ನೇರ ನಮ್ಮಿಂದ ತರಿಸಿಕೊಂಡರೆ ಕೊಳ್ಳುಗರಿಗೆ ಶೇಕಡಾ 25 ಕಮಿಶನ್ ಕೂಡಾ ಸಿಕ್ಕುತ್ತದೆ. ಒಂದು ಎಸ್ಸೆಮ್ಮೆಸ್ ಮೆಸ್ಸೇಜ್ ಅಥವಾ ಇಮೇಲಿನಲ್ಲಿ ಪುಸ್ತಕಕ್ಕೆ ಆರ್ಡರ್ ಮಾಡಬಹುದು. ಮೊಬೈಲ್ ನಂಬರ್: 9482622589. ಕಾರ್ಡ್ ಬರೆದರೂ ಪುಸ್ತಕ ಕಳಿಸುತ್ತೇವೆ. ಹಣ ಆ ಮೇಲೆ ಕಳಿಸಬಹುದು. ಕಾಂಪ್ಲಿಮೆಂಟರಿ ಕಾಪಿ ಕೊಡುವುದಿಲ್ಲ.

ಇರಲಿ. ಇನ್ನು ಮುಂದೆ ನಿಯತವಾಗಿ ಬ್ಲಾಗು ಬರೆಯುತ್ತಿರಬೇಕೆಂದು ನಿರ್ಧರಿಸಿದ್ದೇನೆ. ವಾರಕ್ಕೊಮ್ಮೆ ಬರೆಯಬೇಕೆಂದು ನನ್ನ ಆಸೆ. ನೋಡಬೇಕು.

-----------------------------------------Sunday, January 15, 2012

ಸಮಗ್ರ ಕಥೆಗಳು

ಮೇಲಿನ ನನ್ನ ಪುಸ್ತಕ ಈಗ ಪ್ರಕಟವಾಗಿದೆ. ಇದರ ಪ್ರಕಾಶಕರು:
ಬೋಧಿ ಟ್ರಸ್ಟ್
ಕಲ್ಮಡ್ಕ 574212, ಬೆಳ್ಳಾರೆ
ಕರ್ನಾಟಕ.

ಪುಟಗಳು: 180. ಒಟ್ಟು ಒಂಭತ್ತು ಕಥೆಗಳಿವೆ. ಅವುಗಳಲ್ಲಿ ಎರಡು ನೀಳ್ಗತೆಗಳು ಅಥವಾ ಕಿರು ಕಾದಂಬರಿಗಳು.
ಬೆಲೆ: ರೂ.150.00 (ರೂಪಾಯಿ ನೂರೈವತ್ತು)
ನಮ್ಮಿಂದ ನೇರ ತರಿಸಿಕೊಳ್ಳುವವರಿಗೆ ಶೇಕಡಾ 25 ರಿಯಾಯಿತಿಯಿದೆ.

ನಿಮಗೆ ಪುಸ್ತಕ ಬೇಕಾದಲ್ಲಿ ಹಣವನ್ನು ಚೆಕ್ ಅಥವಾ ಡಿಡಿ ಅಥವಾ ಎಂ. ಓ.ಮೂಲಕ ಕಳಿಸಿ ನಮಗೆ ವಿಳಾಸ ತಿಳಿಸಿರಿ. ಡಿಡಿ ಕೆನರಾ ಬ್ಯಾಂಕ್, ಎಣ್ಮೂರು (Yenmur)--ಇಲ್ಲಿ ಪಾವತಿಸುವಂತೆ ಕಳಿಸಿರಿ. ಚೆಕ್/ಡಿಡಿ/ಎಂಓಗಳು ಬೋಧಿ ಟ್ರಸ್ಟ್ ಹೆಸರಿಗೆ ಇರಲಿ.

ಅಥವಾ ರಿಯಾಯ್ತಿ ಕಳೆದ ಮೊತ್ತವನ್ನು ಬೋಧಿ ಟ್ರಸ್ಟ್, ಉಳಿತಾಯ ಖಾತೆ ಸಂಖ್ಯೆ 1600101008058, ಕೆನರಾ ಬ್ಯಾಂಕ್, ಎಣ್ಮೂರು (Yenmur) 574328, ಕರ್ನಾಟಕ. IFSC: CNRB0001600--ಇಲ್ಲಿಗೆ ಜಮೆ ಮಾಡಿ ನಮಗೆ ವಿಳಾಸ ತಿಳಿಸಿದರೆ ಪುಸ್ತಕ ಕಳಿಸುತ್ತೇವೆ.

ನೀವು ಖಾತೆ ಹೊಂದಿರುವ  ಯಾವುದೇ ಸ್ಥಳದ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನ ಮೂಲಕ ಹೀಗೆ ಹಣ ಕಳಿಸಬಹುದು. ವಿದೇಶದಲ್ಲಿರುವವರು ಅಂಚೆ ವೆಚ್ಚ ಸೇರಿಸಿ ಕಳಿಸಿರಿ.