Monday, April 2, 2012

ಶ್ರೀರಂಗರ ಕಾಲಿದಾಸ

ನಾನು ಇತ್ತೀಚೆಗೆ ಓದಿದ ಒಂದು ಒಳ್ಳೆಯ ಪುಸ್ತಕ ಶ್ರೀರಂಗರು ಬರೆದ ಕಾಲಿದಾಸ. 1970ರಷ್ಟು ಹಿಂದೆ ಬರೆದ ಈ ಪುಸ್ತಕ ಈಗ ಎರಡು ಮೂರು ವರ್ಷದ ಹಿಂದೆ ಅಭಿನವ ಪ್ರಕಾಶನದ ರವಿಕುಮಾರ್ ಅವರಿಂದ ಪುನರ್ಮದ್ರಿತವಾಗಿದೆ. ನಮ್ಮಲ್ಲಿ ಇಪ್ಪತ್ತು ವರ್ಷಗಳಿಗೇ ವಿಸ್ಮೃತಿ ಕವಿಯುವಾಗ ಇಂಥಾ ಪುನರ್ಮದ್ರಣಗಳು ನಮ್ಮ ಹಿರಿಯರು ಎಷ್ಟು ಒಳ್ಳೆಯ ಕೆಲಸ ಮಾಡಿದ್ದರು ಎಂಬುದನ್ನು ನೆನಪಿಸುತ್ತವೆ.

ಮುನ್ನುಡಿಯಲ್ಲಿ ಕೆ. ವಿ. ಸುಬ್ಬಣ್ಣ ಇದು ತುಂಬಾ ಒಳ್ಳೆಯ ಪುಸ್ತಕವೆಂದೂ ಇಂಗ್ಲಿಷಿಗೆ ಅನುವಾದವಾಗಬೇಕಾದ ಅಗತ್ಯವಿದೆ ಎಂದೂ ಹೇಳಿದರೆಂದು ರವಿ ಕುಮಾರ್ ದಾಖಲಿಸಿದ್ದಾರೆ. ನಿಶಿತ ವಿಶ್ಲೇಷಣೆಯ, ಅನವಶ್ಯಕವಾದ ಒಂದು ವಿಶೇಷಣವನ್ನೂ ಬಳಸದ ಈ ಬರೆಹದ ಬಗ್ಗೆ ಅದು ಉತ್ಪ್ರೇಕ್ಷಯ ಮಾತಲ್ಲ. ಶೇಕ್ ಸ್ಪಿಯರ ಕಾಲಿದಾಸನಿಗಿಂತ ದೊಡ್ಡ ಲೇಖಕ ನಿಜ--ಆದರೆ ಅವನ ಬಗ್ಗೆ ಬಂದ ಬಗೆಬಗೆಯ ವಿಶ್ಲೇಷಣೆಗಳನ್ನು ನೋಡಿದಾಗ ಕಾಲಿದಾಸನ ಬಗ್ಗೆ ಬಂದದ್ದು ಅತ್ಯಲ್ಪ ಅನ್ನಿಸುತ್ತದೆ. ಹೀಗಿರುವಾಗ ಅವನನ್ನು ಒಬ್ಬ ದಂತಕತೆಯೆಂದು ನೋಡದೆ ಲೇಖಕನೆಂದು ನೋಡಿ ಅವನ ಕೃತಿಗಳನ್ನೇ ಮಾನದಂಡವಾಗಿ ಇಟ್ಟುಕೊಂಡು ಬರೆದ ಈ ಕೃತಿ ಅಪರೂಪದ್ದು.

ಶ್ರೀರಂಗರು ದೊಡ್ಡ ಸಂಸ್ಕೃತ ವಿದ್ವಾಂಸರು. ಜೊತೆಗೆ ಆಧುನಿಕ ಪಾಶ್ಚಾತ್ಯ ಸಾಹಿತ್ಯ ಬಲ್ಲವರು; ಕನ್ನಡ ಸಾಹಿತ್ಯ ಮಾತ್ರವಲ್ಲದೆ ಸಾಮಾಜಿಕ ವಿಷಯಗಳಲ್ಲಿ ಆಸಕ್ತರೂ ತೊಡಗಬಲ್ಲವರೂ ಆಗಿದ್ದವರು. ಅವರ ನಾಟಕಗಳಲ್ಲಿ ಅದಕ್ಕೆ ಬೇಕಾದ ದಾಖಲೆಗಳು ಸಿಗುತ್ತವೆ. 1930ರಷ್ಟು ಹಿಂದೆ ಹರಿಜನ್ವಾರದಂಥಾ ನಾಟಕ ಬರೆದು ಮಡಿವಂತರ ವೈರ ಕಟ್ಟಿಕೊಂಡಿದ್ದವರು. ಅವರಿದ್ದಾಗ ನಮ್ಮ ಸಾಮಾಜಿಕ ವೈಷಮ್ಯಗಳ ಬಗ್ಗೆ ರಾಜಕಾರಣಿಗಳಿಗೆ ಬಹಿರಂಗ ಪತ್ರಗಳನ್ನು ಬರೆದು ಪತ್ತಿಕೆಗಳಲ್ಲಿ ಪ್ರಕಟಿಸುತ್ತಿದ್ದರು. 1980ರ ಆದಿಭಾಗದಲ್ಲಿ ರಿಪೇರಿಗೆಂದು ರವೀಂದ್ರ ಕಲಾಕ್ಷೇತ್ರವನ್ನು ಮುಚ್ಚಿದ್ದರು. ದೀರ್ಘ ಕಾಲ ಕಳೆದರೂ ರಿಪೇರಿ ಮುಗಿದು ಕಲಾಕ್ಷೇತ್ರ ತೆರೆಯಲಿಲ್ಲ. ಆಗ ನಾಟಕಕ್ಕೆ ಸಂಬಂಧಿಸಿದ ಅನೇಕರು ಕಲಾಕ್ಷೇತ್ರವನ್ನು ಬೇಗ ತೆರೆಸಬೇಕೆಂದು ಅದರ ಮುಂಭಾಗದಲ್ಲಿ ಇಡೀ ದಿನ ಧರಣಿ ಕೂತಿದ್ದೆವು. ಆಗ ಹಾಗೆ ಬಂದು ಧರಣಿ ಕೂತವರಲ್ಲಿ ಎಂಭತ್ತು ವರ್ಷದ ಶ್ರೀರಂಗರು ಒಬ್ಬರು. ಆ  ಹಿರಿಯರು ಮೆಟ್ಟಿಲ ಮೇಲೆ ಕೂತು ಧರಣಿ ನಡೆಸಿದ್ದು ಕನ್ನಡ ಸಂಸ್ಕೃತಿಯ ಬಹು ಹೆಮ್ಮೆಯ ಕ್ಷಣ. ಅದಾದ ಎರಡು ಮೂರು ವರ್ಷಕ್ಕೆ ಅವರು ತೀರಿಕೊಂಡರು.

ಭರತನ ನಾಟ್ಯಶಾಸ್ತ್ರದ ಇಂಗ್ಲಿಷ್ ಕನ್ನಡ ಅನುವಾದಗಳು ಅವರ ಕೊನೆಯ ಕೃತಿಗಳು. ಜ್ವರ ಬರುತ್ತಿದ್ದರೂ ಕೂತು ಅನುವಾದಿಸಿದ್ದರು. ಅವರ ಕೇಳು ಜನಮೇಜಯ ಭಾರತೀಯ ರಂಗಭೂಮಿಯಲ್ಲಿ ಹೊಸ ಅಲೆ ಹುಟ್ಟಿಸಿದ ಕೃತಿ.
ಕಾಲಿದಾಸ ಕುರಿತ ಈ ಕೃತಿಯಲ್ಲಿ ಶ್ರೀರಂಗರು ಮೂರು ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರಿಸುತ್ತಾರೆ. ಅವನ ಕಾಲ, ಅವನು ಈ ಬಗೆಯ ಕೃತಿಗಳನ್ನು ಯಾಕೆ ಬರೆದ ಮತ್ತು ಇಷ್ಟು ವರ್ಷ ಕಳೆದರೂ ಜಗತ್ತಿನಾದ್ಯಂತ ಯಾಕ ಅವನು ಮತ್ತೆ ಮತ್ತೆ ಓದುತ್ತಿರುವ ಲೇಖಕನಾಗಿ ಉಳಿದಿದ್ದಾನೆ--ಈ ಪ್ರಶ್ನೆಗಳಿಗೆ ಅವರು ಕೊಡುವ ಉತ್ತರಗಳು ಮೌಲಿಕವಾಗಿವೆ. ಆಧಾರಸಹಿತವಾಗಿ, ವಿಶ್ಲೇಷಣೆಯಿಂದ ಕೂಡಿವೆ.

ಒಂದು ಮಾತಿನ ಬಗ್ಗೆ ಮಾತ್ರ ಇತಿಹಾಸಕಾರರ  ಭಿನ್ನ ಅಭಿಪ್ರಾಯಗಳಿರುವುದು ನನ್ನ ಗಮನಕ್ಕೆ ಬಂತು. ಶ್ರೀರಂಗರು, ಎರಡನೆಯ ಚಂದ್ರಗುಪ್ತ ತನ್ನ ಸಹೋದರನ ಕೊಲೆ ಮಾಡಿಸಿ ಅವನ ಹೆಂಡತಿಯನ್ನು ವಶಪಡಿಸಿಕೊಂಡಿದ್ದ ಎಂಬುದನ್ನು ಉದಾಹರಿಸಿ, "ಆದುದರಿಂದ [ಕಾಲಿದಾಸ] ಪಾಪವೃತ್ತಿಯವನಾದ ಎರಡನೆಯ ಚಂದ್ರಗುಪ್ತನ ಆಸ್ಥಾನ ಕವಿಯಾಗಿರಲಾರನು" (ಪುಟ 28) ಎಂದು ಬರೆಯುತ್ತಾರೆ. ಆದರೆ ಚಂದ್ರಗುಪ್ತನ ಅಣ್ಣ ಶತ್ರುಗಳಿಗೆ ಸೋತು ತನ್ನ ಹೆಂಡತಿಯನ್ನೂ ರಾಜ್ಯವನ್ನೂ ಅವರಿಗೆ ಒಪ್ಪಿಸಹೊರಟಿದ್ದ, ಅಂಥಾ ಸಂದರ್ಭದಲ್ಲಿ ಚಂದ್ರಗುಪ್ತ ಅಣ್ಣನನ್ನು ಕೊಂದು ಶತ್ರುಗಳನ್ನು ಸೋಲಿಸಿ ರಾಜ್ಯವನ್ನೂ ಕುಟುಂಬದ ಮರ್ಯಾದೆಯನ್ನೂ ಉಳಿಸಿದ, ಹೀಗಾಗಿ ಅವನು ಮಾಡಿದ ಭ್ರಾತೃಹತ್ಯೆ ಅನಿವಾರ್ಯವಾಗಿತ್ತು ಎಂದು ರೋಮಿಲಾ ಥಾಪರ್ ರಂಥಾ ಇತಿಹಾಸಕಾರರು ಬರೆಯುತ್ತಾರೆ. ಶ್ರೀರಂಗರು 1970ರಲ್ಲಿ ಈ ಪುಸ್ತಕ ಬರೆಯುವ ಹೊತ್ತಿಗೆ ಚಂದ್ರಗುಪ್ತನ ಬಗ್ಗೆ ಈ ದೃಷ್ಟಿಕೋನ ಇತ್ತು. ಅವರ ಗಮನಕ್ಕೆ ಬಂದಿರಲಿಲ್ಲ, ಅಷ್ಟೆ. ಆದರೆ ಆ ಕಾಲ ಅವನತಿಯ ಕಾಲ, ಕಾಲಿದಾಸ ತನ್ನ ಕೃತಿಗಳಲ್ಲಿ ಈ ಅವನತಿಯ ಬಗ್ಗೆ ಬರೆದ ಎಂಬ ಅವರ ಮಾತು ನಿಜ.


***********************


No comments:

Post a Comment