Sunday, April 8, 2012

ರವಿ ಕುಮಾರ್ ಗೆ ಅಭಿನಂದನೆ


ಇದು ಇವತ್ತಿನ (ಎಪ್ರಿಲ್ 8) ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಪತ್ರ.

ಪತ್ರವೇ ಸೂಚಿಸುವಂತೆ ಗಂಗಾಧರ ಮಡಿವಾಳೇಶ್ವರ ತುರಮುರಿಯವರ ಪುಸ್ತಕವನ್ನು ಪ್ರತಿ ಮಾಡಿ ಯಾರೋ ಒಬ್ಬ ತನ್ನದೆಂದು ಪ್ರಕಾಶಕರಾದ ಅಭಿನವ ಪ್ರಕಾಶನಕ್ಕೆ ಕಳಿಸಿದ್ದಾರೆ. ಮಾಲೀಕರಾದ ರವಿ ಕುಮಾರ್ ಅದನ್ನು ಪ್ರಕಟಿಸಿದ್ದಾರೆ. ಈಗ ಮೂರು ಮುದ್ರಣ ಆದ ಮೇಲೆ ಅದು ಹಿಂದೆ ಪ್ರಕಟವಾದ ಗಂಗಾಧರ ಮಡಿವಾಳೇಶ್ವರ ತುರಮುರಿಯವರ ಪುಸ್ತಕದ ಪ್ರತಿ ಎನ್ನುವುದು ಗೊತ್ತಾಗಿದೆ. ರವಿ ಅದಕ್ಕಾಗಿ ಕ್ಷಮೆ ಯಾಚಿಸಿದ್ದು ಮಾತ್ರವಲ್ಲದೆ ಈಗ ಮಾರುಕಟ್ಟೆಯಲ್ಲಿ ಉಳಿದಿರುವ ಪ್ರತಿಗಳನ್ನು ವಾಪಾಸು ಪಡೆಯಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಅದಕ್ಕೆ ಬೇಕಾದ ವ್ಯವಸ್ಥೆ ಅವರು ಮಾಡಲಿದ್ದಾರೆ.

ಅವರಿಗೆ ನನ್ನ ಅಭಿನಂದನೆ ಹೀಗೆ ಪ್ರತಿಗಳನ್ನು ವಾಪಸು ಪಡೆಯಲು ನಿರ್ಧರಿಸಿದ್ದರ ಬಗ್ಗೆ. ಇದು ದಿಟ್ಟ ನೈತಿಕ ನಿರ್ಧಾರ. ದೊಡ್ಡ  ಅಭಿರುಚಿಯ ಘನಸ್ಥ ಪ್ರಕಾಶಕರು ಮಾತ್ರ ಇಂಥಾ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಿಂದ ಅವರಿಗೆ ಆರ್ಥಿಕವಾಗಿ ನಷ್ಟವಾಗುತ್ತದೆ. ಆದರೆ ಅವರು ಈ ಮೂಲಕ ಆರೋಗ್ಯಕರ ಬೌದ್ಧಿಕ ವಾತಾವರಣಕ್ಕೆ ಬೇಕಾದ ಮುಖ್ಯ ಮೇಲ್ಪಂಕ್ತಿ ಹಾಕುತ್ತಿದ್ದಾರೆ.

ಯಾಕೆಂದರೆ ಇಂಥಾ ತಪ್ಪುಗಳನ್ನು ಸರಿಯೆಂದು ಸಮರ್ಥಿಸಿಕೊಳ್ಳುವವರ ಪಡೆಯೇ ಇದೆ. ಸಾರಾ ಅಬೂಬಕ್ಕರ್ ಅವರ ಚಂದ್ರಗಿರಿಯ ತೀರದಲ್ಲಿ ಕದ್ದು ಸಿನೆಮಾ ಮಾಡಿದ್ದನ್ನು ಒಬ್ಬ ಕವಿ-ಪತ್ರಕರ್ತ ಲೇಖನ ಬರೆದು ಸಮರ್ಥಿಸಿಕೊಂಡರು. ಬ್ರೆಕ್ಟಿನ ತ್ರಿ ಪೆನ್ನಿ ಅಪೆರಾ ಆಡಲು ಕಾಪಿರೈಟ್ ಹೊಂದಿದವರ ಒಪ್ಪಿಗೆ ಸಿಕ್ಕಲಿಲ್ಲವೆಂದು ಬ್ರೆಕ್ಟಿನ ಹೆಸರು ಹೇಳದೆ ಆಡಿದ್ದನ್ನು ಸಮರ್ಥಿಸಿಕೊಂಡ ಲೇಖನವೊಂದನ್ನು ಓದಿದ್ದೆ. ಅದರ ಲೇಖಕ ಭಾರತೀಯ ರಂಗಭೂಮಿಗೆ ಸಂಬಂಧಿಸಿದ ಸುಧನ್ವ ದೇಶಪಾಂಡೆ. ನನ್ನ ಹ್ಯಾಮ್ಲೆಟ್  ಅನುವಾದವನ್ನು ರಂಗಕರ್ಮಿ ಪ್ರಸನ್ನ  ತನ್ನದೆಂದು ಹೇಳಿಕೊಂಡು ಆಡಿಸಿ ಪ್ರಕಟಿಸಿದಾಗ ನಾನು ಇರುವ  ವಿಷಯ ಬಹಿರಂಗಪಡಿಸಿ ಕರಪತ್ರ ಹಂಚಿದ್ದೆ. ಆಗ ನನ್ನ ಬೆಂಬಲಕ್ಕೆ ಆ ಅನುವಾದದ ಪ್ರಕಾಶಕರು ತುಂಬಾ ತಡವಾಗಿ ಬಂದರು--ಅದೂ ಖಾಸಗಿಯಾಗಿ; ಸಾರ್ವಜನಿಕ ಹೇಳಿಕೆ ಮೂಲಕ ಅಲ್ಲ.  ಪ್ರಕಾಶಕರ ಬೆಂಬಲ ಇಲ್ಲ ಎಂದಾದರೆ ಇಂಥಾ ಪ್ರಕರಣಗಳು ಸಹಜವಾಗಿಯೇ ಕಮ್ಮಿಯಾಗುತ್ತವೆ.

ಇಂಥಾ ಕಾರಣಕ್ಕಾಗಿಯೋ ಏನೋ--ಇಂಗ್ಲೆಂಡಿನಲ್ಲಿ Playwrights Against Directors ಎಂಬ ಸಂಸ್ಥೆಯೇ ಹುಟ್ಟಿಕೊಂಡಿದೆ. ನಾಟಕ ಕೃತಿಗಳನ್ನು ಬೇಕಾಬಿಟ್ಟಿ ಆಡುವ ನಿರ್ದೇಶಕರಿಂದ  ನಾಟಕಕಾರರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಇರುವ ಸಂಸ್ಥೆ ಇದು.

ಒಬ್ಬ ಲೇಖಕ ನಿಧನವಾದ ನಂತರ ಅರುವತ್ತು ವರ್ಷಗಳ ವರೆಗೆ ಮಾತ್ರ ಅವರ ವಾರಸುದಾರರಿಗೆ ಕೃತಿಸ್ವಾಮ್ಯ ಇರುತ್ತದೆ. ತುರಮುರಿಯವರು ನಿಧನರಾಗಿ ಅರುವತ್ತು ವರ್ಷ ಕಳೆದಿದ್ದರೆ ರವಿ ಕುಮಾರ್ ಅವರ ಪುಸ್ತಕದ ಪುನರ್ಮುದ್ರಣಕ್ಕೆ ವಾರಸುದಾರರ ಒಪ್ಪಿಗೆ ಕೇಳಬೇಕಾಗಿಲ್ಲ. ಆದರೆ ಅವರನ್ನು ಒಳಗೊಳ್ಳುವುದು ಸೌಜನ್ಯ.  ಈ ದೃಷ್ಟಿಯಲ್ಲಿಯೂ ರವಿ ಕುಮಾರ್ ನಿಲುವು ಸರಿಯಾಗಿದೆ.

Monday, April 2, 2012

ಶ್ರೀರಂಗರ ಕಾಲಿದಾಸ

ನಾನು ಇತ್ತೀಚೆಗೆ ಓದಿದ ಒಂದು ಒಳ್ಳೆಯ ಪುಸ್ತಕ ಶ್ರೀರಂಗರು ಬರೆದ ಕಾಲಿದಾಸ. 1970ರಷ್ಟು ಹಿಂದೆ ಬರೆದ ಈ ಪುಸ್ತಕ ಈಗ ಎರಡು ಮೂರು ವರ್ಷದ ಹಿಂದೆ ಅಭಿನವ ಪ್ರಕಾಶನದ ರವಿಕುಮಾರ್ ಅವರಿಂದ ಪುನರ್ಮದ್ರಿತವಾಗಿದೆ. ನಮ್ಮಲ್ಲಿ ಇಪ್ಪತ್ತು ವರ್ಷಗಳಿಗೇ ವಿಸ್ಮೃತಿ ಕವಿಯುವಾಗ ಇಂಥಾ ಪುನರ್ಮದ್ರಣಗಳು ನಮ್ಮ ಹಿರಿಯರು ಎಷ್ಟು ಒಳ್ಳೆಯ ಕೆಲಸ ಮಾಡಿದ್ದರು ಎಂಬುದನ್ನು ನೆನಪಿಸುತ್ತವೆ.

ಮುನ್ನುಡಿಯಲ್ಲಿ ಕೆ. ವಿ. ಸುಬ್ಬಣ್ಣ ಇದು ತುಂಬಾ ಒಳ್ಳೆಯ ಪುಸ್ತಕವೆಂದೂ ಇಂಗ್ಲಿಷಿಗೆ ಅನುವಾದವಾಗಬೇಕಾದ ಅಗತ್ಯವಿದೆ ಎಂದೂ ಹೇಳಿದರೆಂದು ರವಿ ಕುಮಾರ್ ದಾಖಲಿಸಿದ್ದಾರೆ. ನಿಶಿತ ವಿಶ್ಲೇಷಣೆಯ, ಅನವಶ್ಯಕವಾದ ಒಂದು ವಿಶೇಷಣವನ್ನೂ ಬಳಸದ ಈ ಬರೆಹದ ಬಗ್ಗೆ ಅದು ಉತ್ಪ್ರೇಕ್ಷಯ ಮಾತಲ್ಲ. ಶೇಕ್ ಸ್ಪಿಯರ ಕಾಲಿದಾಸನಿಗಿಂತ ದೊಡ್ಡ ಲೇಖಕ ನಿಜ--ಆದರೆ ಅವನ ಬಗ್ಗೆ ಬಂದ ಬಗೆಬಗೆಯ ವಿಶ್ಲೇಷಣೆಗಳನ್ನು ನೋಡಿದಾಗ ಕಾಲಿದಾಸನ ಬಗ್ಗೆ ಬಂದದ್ದು ಅತ್ಯಲ್ಪ ಅನ್ನಿಸುತ್ತದೆ. ಹೀಗಿರುವಾಗ ಅವನನ್ನು ಒಬ್ಬ ದಂತಕತೆಯೆಂದು ನೋಡದೆ ಲೇಖಕನೆಂದು ನೋಡಿ ಅವನ ಕೃತಿಗಳನ್ನೇ ಮಾನದಂಡವಾಗಿ ಇಟ್ಟುಕೊಂಡು ಬರೆದ ಈ ಕೃತಿ ಅಪರೂಪದ್ದು.

ಶ್ರೀರಂಗರು ದೊಡ್ಡ ಸಂಸ್ಕೃತ ವಿದ್ವಾಂಸರು. ಜೊತೆಗೆ ಆಧುನಿಕ ಪಾಶ್ಚಾತ್ಯ ಸಾಹಿತ್ಯ ಬಲ್ಲವರು; ಕನ್ನಡ ಸಾಹಿತ್ಯ ಮಾತ್ರವಲ್ಲದೆ ಸಾಮಾಜಿಕ ವಿಷಯಗಳಲ್ಲಿ ಆಸಕ್ತರೂ ತೊಡಗಬಲ್ಲವರೂ ಆಗಿದ್ದವರು. ಅವರ ನಾಟಕಗಳಲ್ಲಿ ಅದಕ್ಕೆ ಬೇಕಾದ ದಾಖಲೆಗಳು ಸಿಗುತ್ತವೆ. 1930ರಷ್ಟು ಹಿಂದೆ ಹರಿಜನ್ವಾರದಂಥಾ ನಾಟಕ ಬರೆದು ಮಡಿವಂತರ ವೈರ ಕಟ್ಟಿಕೊಂಡಿದ್ದವರು. ಅವರಿದ್ದಾಗ ನಮ್ಮ ಸಾಮಾಜಿಕ ವೈಷಮ್ಯಗಳ ಬಗ್ಗೆ ರಾಜಕಾರಣಿಗಳಿಗೆ ಬಹಿರಂಗ ಪತ್ರಗಳನ್ನು ಬರೆದು ಪತ್ತಿಕೆಗಳಲ್ಲಿ ಪ್ರಕಟಿಸುತ್ತಿದ್ದರು. 1980ರ ಆದಿಭಾಗದಲ್ಲಿ ರಿಪೇರಿಗೆಂದು ರವೀಂದ್ರ ಕಲಾಕ್ಷೇತ್ರವನ್ನು ಮುಚ್ಚಿದ್ದರು. ದೀರ್ಘ ಕಾಲ ಕಳೆದರೂ ರಿಪೇರಿ ಮುಗಿದು ಕಲಾಕ್ಷೇತ್ರ ತೆರೆಯಲಿಲ್ಲ. ಆಗ ನಾಟಕಕ್ಕೆ ಸಂಬಂಧಿಸಿದ ಅನೇಕರು ಕಲಾಕ್ಷೇತ್ರವನ್ನು ಬೇಗ ತೆರೆಸಬೇಕೆಂದು ಅದರ ಮುಂಭಾಗದಲ್ಲಿ ಇಡೀ ದಿನ ಧರಣಿ ಕೂತಿದ್ದೆವು. ಆಗ ಹಾಗೆ ಬಂದು ಧರಣಿ ಕೂತವರಲ್ಲಿ ಎಂಭತ್ತು ವರ್ಷದ ಶ್ರೀರಂಗರು ಒಬ್ಬರು. ಆ  ಹಿರಿಯರು ಮೆಟ್ಟಿಲ ಮೇಲೆ ಕೂತು ಧರಣಿ ನಡೆಸಿದ್ದು ಕನ್ನಡ ಸಂಸ್ಕೃತಿಯ ಬಹು ಹೆಮ್ಮೆಯ ಕ್ಷಣ. ಅದಾದ ಎರಡು ಮೂರು ವರ್ಷಕ್ಕೆ ಅವರು ತೀರಿಕೊಂಡರು.

ಭರತನ ನಾಟ್ಯಶಾಸ್ತ್ರದ ಇಂಗ್ಲಿಷ್ ಕನ್ನಡ ಅನುವಾದಗಳು ಅವರ ಕೊನೆಯ ಕೃತಿಗಳು. ಜ್ವರ ಬರುತ್ತಿದ್ದರೂ ಕೂತು ಅನುವಾದಿಸಿದ್ದರು. ಅವರ ಕೇಳು ಜನಮೇಜಯ ಭಾರತೀಯ ರಂಗಭೂಮಿಯಲ್ಲಿ ಹೊಸ ಅಲೆ ಹುಟ್ಟಿಸಿದ ಕೃತಿ.
ಕಾಲಿದಾಸ ಕುರಿತ ಈ ಕೃತಿಯಲ್ಲಿ ಶ್ರೀರಂಗರು ಮೂರು ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರಿಸುತ್ತಾರೆ. ಅವನ ಕಾಲ, ಅವನು ಈ ಬಗೆಯ ಕೃತಿಗಳನ್ನು ಯಾಕೆ ಬರೆದ ಮತ್ತು ಇಷ್ಟು ವರ್ಷ ಕಳೆದರೂ ಜಗತ್ತಿನಾದ್ಯಂತ ಯಾಕ ಅವನು ಮತ್ತೆ ಮತ್ತೆ ಓದುತ್ತಿರುವ ಲೇಖಕನಾಗಿ ಉಳಿದಿದ್ದಾನೆ--ಈ ಪ್ರಶ್ನೆಗಳಿಗೆ ಅವರು ಕೊಡುವ ಉತ್ತರಗಳು ಮೌಲಿಕವಾಗಿವೆ. ಆಧಾರಸಹಿತವಾಗಿ, ವಿಶ್ಲೇಷಣೆಯಿಂದ ಕೂಡಿವೆ.

ಒಂದು ಮಾತಿನ ಬಗ್ಗೆ ಮಾತ್ರ ಇತಿಹಾಸಕಾರರ  ಭಿನ್ನ ಅಭಿಪ್ರಾಯಗಳಿರುವುದು ನನ್ನ ಗಮನಕ್ಕೆ ಬಂತು. ಶ್ರೀರಂಗರು, ಎರಡನೆಯ ಚಂದ್ರಗುಪ್ತ ತನ್ನ ಸಹೋದರನ ಕೊಲೆ ಮಾಡಿಸಿ ಅವನ ಹೆಂಡತಿಯನ್ನು ವಶಪಡಿಸಿಕೊಂಡಿದ್ದ ಎಂಬುದನ್ನು ಉದಾಹರಿಸಿ, "ಆದುದರಿಂದ [ಕಾಲಿದಾಸ] ಪಾಪವೃತ್ತಿಯವನಾದ ಎರಡನೆಯ ಚಂದ್ರಗುಪ್ತನ ಆಸ್ಥಾನ ಕವಿಯಾಗಿರಲಾರನು" (ಪುಟ 28) ಎಂದು ಬರೆಯುತ್ತಾರೆ. ಆದರೆ ಚಂದ್ರಗುಪ್ತನ ಅಣ್ಣ ಶತ್ರುಗಳಿಗೆ ಸೋತು ತನ್ನ ಹೆಂಡತಿಯನ್ನೂ ರಾಜ್ಯವನ್ನೂ ಅವರಿಗೆ ಒಪ್ಪಿಸಹೊರಟಿದ್ದ, ಅಂಥಾ ಸಂದರ್ಭದಲ್ಲಿ ಚಂದ್ರಗುಪ್ತ ಅಣ್ಣನನ್ನು ಕೊಂದು ಶತ್ರುಗಳನ್ನು ಸೋಲಿಸಿ ರಾಜ್ಯವನ್ನೂ ಕುಟುಂಬದ ಮರ್ಯಾದೆಯನ್ನೂ ಉಳಿಸಿದ, ಹೀಗಾಗಿ ಅವನು ಮಾಡಿದ ಭ್ರಾತೃಹತ್ಯೆ ಅನಿವಾರ್ಯವಾಗಿತ್ತು ಎಂದು ರೋಮಿಲಾ ಥಾಪರ್ ರಂಥಾ ಇತಿಹಾಸಕಾರರು ಬರೆಯುತ್ತಾರೆ. ಶ್ರೀರಂಗರು 1970ರಲ್ಲಿ ಈ ಪುಸ್ತಕ ಬರೆಯುವ ಹೊತ್ತಿಗೆ ಚಂದ್ರಗುಪ್ತನ ಬಗ್ಗೆ ಈ ದೃಷ್ಟಿಕೋನ ಇತ್ತು. ಅವರ ಗಮನಕ್ಕೆ ಬಂದಿರಲಿಲ್ಲ, ಅಷ್ಟೆ. ಆದರೆ ಆ ಕಾಲ ಅವನತಿಯ ಕಾಲ, ಕಾಲಿದಾಸ ತನ್ನ ಕೃತಿಗಳಲ್ಲಿ ಈ ಅವನತಿಯ ಬಗ್ಗೆ ಬರೆದ ಎಂಬ ಅವರ ಮಾತು ನಿಜ.


***********************