Saturday, November 26, 2011

ವಿಮರ್ಶಕರು ಮತ್ತು ಓದುಗರು

ನಿನ್ನೆ ನಾನು ವಿಮರ್ಶಕರ ಬಗ್ಗೆ ಬರೆದದ್ದು ಲೇಖಕರ ದೃಷ್ಟಿಯಿಂದ. ಆದರೆ ಲೇಖಕರು ಪೂರ್ತಿ ವಿಮರ್ಶೆ ಬಗ್ಗೆ ನಿರ್ಲಿಪ್ತರಾಗಿ ಇರುತ್ತಾರೆ ಎನ್ನುವುದು ಸರಿಯಲ್ಲ. ಒಳ್ಳೆಯ ವಿಮರ್ಶೆ ಬರದಿದ್ದರೆ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ. ಲೇಖಕನ ಮೊದಲ ಕೃತಿಯಾದರಂತೂ ಒಳ್ಳೆಯ ವಿಮರ್ಶೆ ಅವನನ್ನು ಸಾಹಿತ್ಯ ಕ್ಷೇತ್ರದಲ್ಲಿ ನೆಲೆಗೊಳಿಸುವ ದೃಷ್ಟಿಯಿಂದ ಮುಖ್ಯ. ಗಟ್ಟಿಯಾಗಿ ನೆಲೆ ನಿಂತ ಲೇಖಕನನ್ನೂ ವಿಮರ್ಶೆ ವಿಚಲಿತಗೊಳಿಸಬಲ್ಲುದು. ಉದಾಹರಣೆಗೆ ಭೈರಪ್ಪನವರ ಬಗ್ಗೆ ಅನಂತಮೂರ್ತಿಯವರು ಬರೆದ ಲೇಖನ ನೋಡಿ. ಅನಂತಮೂರ್ತಿ ಅವರನ್ನು ಜನಪ್ರಿಯ ಲೇಖಕ ಎಂದ ಮೇಲೆ ಅನೇಕರು ಹಾಗೆ ಹೇಳಲು ಸುರು ಮಾಡಿದರು. ಪರಿಣಾಮವಾಗಿ ಈ ದೊಡ್ಡ ಲೇಖಕ ಪರ್ವ  ಕಾದಂಬರಿಯ ನಂತರ ಏರಿದ ಎತ್ತರ ಸರ್ವತ್ರ ಒಪ್ಪಿಗೆ ಪಡೆಯದೆ ಹೋಯಿತು. ಪರ್ವದ ನಂತರದ ಭೈರಪ್ಪ ನಿಸ್ಸಂದಿಗ್ಧವಾಗಿ ಅನಂತಮೂರ್ತಿಯವರಿಗಿಂತ ಹೆಚ್ಚು ಅನುಭವ ವಿಸ್ತಾರ ಇರುವ ಕಾದಂಬರಿಕಾರ.

ಸಹೃದಯತೆಯಿಂದ, ತನ್ನನ್ನು ಮೆರೆಸುವುದಕ್ಕಲ್ಲ, ಕೃತಿಯನ್ನು ಅರಿಯಬೇಕು ಎಂಬ ದೃಷ್ಟಿಯಿಂದ ಬರೆದ ವಿಮರ್ಶೆ ಓದುರಿಗೆ ಸಹಾಯಮಾಡಬಲ್ಲುದು. ಕನ್ನಡದ ಅನೇಕ ನವ್ಯ ವಿಮರ್ಶಕರ ವಿಮರ್ಶೆ ಹೀಗೆ ಕೃತಿಯನ್ನು ಅರಿತುಕೊಳ್ಳಲು ಅನೇಕರಿಗೆ ಸಹಾಯಮಾಡಿದೆ. ನವ್ಯ ವಿಮರ್ಶೆ ಬರುವ ಮೊದಲು ವಿಮರ್ಶೆಯೆಂದರೆ ಬಹುತೇಕ ಕಥಾಸಾರಾಂಶ ಕೊಡುವುದು
ಅಥವಾ ವಿಶೇಷಣಗಳನ್ನು ಬಳಸಿ ಹೊಗಳುವುದಾಗಿತ್ತು. ವಿಮರ್ಶಕರು ಒಂದು ಕೃತಿಯ ನೆಯ್ಗೆಯ ಬಗ್ಗೆ, ಅದರ ಸಂವಿಧಾನದ ಬಗ್ಗೆ, ಪದಗಳ ಬಳಕೆ ಬಗ್ಗೆ ಬರೆಯಲು ಸುರು ಮಾಡಿದ ಮೇಲೆ ಸಮಕಾಲೀನ ಕೃತಿಗಳ ಬಗೆಗಿನ ತಿಳುವಳಿಕೆ ಮಾತ್ರವಲ್ಲ, ಪ್ರಾಚೀನ ಕೃತಿಗಳ ತಿಳುವಳಿಕೆ ಕೂಡಾ ಹೆಚ್ಚಿದೆ. ವಚನಕಾರರ, ಪಂಪನ ಕೃತಿಗಳ ಸೌಂದರ್ಯದ ಬಗ್ಗೆ ನಮ್ಮ ಅರಿವು ವಿಮರ್ಶಕರ ವಿಶ್ಲೇಷಣಿಯಿಂದಾಗಿ ಹೆಚ್ಚು ಸೂಕ್ಷ್ಮವಾಗಿದೆ. ಶೇಕ್ ಸ್ಪಿಯರ್ ಕೃತಿಗಳ ತಿಳುವಳಿಕೆ ಹೆಚ್ಚಿಸಿದ್ದರಲ್ಲಿ ಕೆರೊಲಿನ್ ಸ್ಪರ್ಜನ್ ರಂಥವರು ಮಾಡಿದ ಅವನ ಪ್ರತಿಮೆಗಳ ವಿಶ್ಲೇಷಣೆಯ ಕೊಡುಗೆ ತುಂಬಾ ಇದೆ.

ಆದರೆ ಲೇಖಕರು ವಿಮರ್ಶಕರ ಅಭಿರುಚಿಗೆ ಅನುಗುಣವಾಗಿ ಬರೆಯುವುದು, ಅವರನ್ನು ಓಲೈಸುವುದು ಆತ್ಮಹತ್ಯಾತ್ಮಕ. ಲೇಖಕ ತನ್ನ ಸೃಜನಶೀಲ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕಾದರೆ ಸ್ವಯಂಭುವಾಗಿರಬೇಕು.


ವಿಮರ್ಶಕರು ಮತ್ತು ಲೇಖಕರು

ಶಿವರಾಮ ಕಾರಂತರು ವಿಮರ್ಶಕರ ಬಗ್ಗೆ ಯೋಚಿಸುತ್ತಿರಲಿಲ್ಲ ಎಂದು ಅವರ ಹುಟ್ಟುಹಬ್ಬದ ದಿನ ನಾನು ಹೇಳಿದ ಮಾತನ್ನು ಒಬ್ಬ ಓದುಗರು ಇಷ್ಟ ಪಟ್ಟಿದ್ದಾರೆ. ನಿಜವಾಗಿ ನೋಡಿದರೆ ಯಾವ ಮುಖ್ಯ ಲೇಖಕನೂ ವಿಮರ್ಶಕರು ಏನು ಹೇಳುತ್ತಾರೆ ಎಂಬ ಬಗ್ಗೆ ಯೋಚಿಸುವುದಿಲ್ಲ. ಅವನು ತನ್ನ ಮನಸ್ಸಿನಲ್ಲಿರುವ ತನ್ನ ಅನುಭವ ಮತ್ತು ತಾನು ಅಭಿವ್ಯಕ್ತಿಗಾಗಿ ಆರಿಸಿಕೊಂಡ ಭಾಷೆ ಬಗ್ಗೆ  ಮಾತ್ರ ಯೋಚಿಸುತ್ತಾನೆ. ಹೆಚ್ಚಿನ ವಿಮರ್ಶಕರು ಕೆಲವು ಪೂರ್ವನಿರ್ಧಾರಿತ ತೀರ್ಮಾನಗಳಿಂದ ಹೊರಡುತ್ತಾರೆ, ಅದಕ್ಕಿಂತ ಭಿನ್ನವಾಗಿರುವ ಕೃತಿ ಅವರಿಗೆ ರುಚಿಸುವುದಿಲ್ಲ, ಅವರ ಪೂರ್ವನಿರ್ಧಾರಿತ ಅಭಿರುಚಿಗೆ ಅನುಗುಣವಾಗಿ ಲೇಖಕರು ಬರೆಯಹೊರಟರೆ ಯಾವ ಹೊಸ ಬಗೆಯ ಪ್ರಯೋಗವೂ ಸಾಧ್ಯವಾಗುವುದಿಲ್ಲ. ಆದರೂ ಕೆಲವು ವಿಮರ್ಶಕರ ಟೀಕೆಯಿಂದ ಲೇಖಕರ ಸ್ವವಿಮರ್ಶೆ ಹೆಚ್ಚುತ್ತದೆ ಮತ್ತು ಅದರಿಂದ ಬರೆವಣಿಗೆಗೆ ಅನುಕೂಲವಾಗುತ್ತದೆ ಎಂಬುದು ನಿಜ. ಹೀಗೆ ಸಹಾಯ ಮಾಡುವವರನ್ನು ಲೇಖಕನಿಗೆ ಹೊರಗಿನವನಾದ ವಿಮರ್ಶಕ ಅನ್ನುವುದಕ್ಕಿಂತ ಲೇಖಕ ಏನು ಮಾಡುತ್ತಾನೆಂಬುದನ್ನು ಸಹಾನುಭೂತಿಯಿಂದ ತಿಳಿದ ಮತ್ತು ತಿಳಿಯಬಲ್ಲ ಸಹೃದಯ ಎನ್ನುವುದು ಹೆಚ್ಚು ಸರಿ. ಕುರ್ತಕೋಟಿ ಅನೇಕರಿಗೆ ಇಂಥಾ ಸಹೃದಯರಾಗಿದ್ದರು; ಅಡಿಗರು ಅವರ ಹತ್ತಿರದವರಿಗೆ ಇಂಥಾ ಸಹೃದಯರಾಗಿದ್ದರು.

ಕಾರಂತರ ಹಾಗೆ ಬೇಂದ್ರೆಯವರೂ ಅಕಡೆಮಿಕ್ ಆದ, ವಿದ್ಯಾವಂತರಾದ ಲೇಖಕ ವಿಮರ್ಶಕ ಮೊದಲಾದವರಿಗೆ ಹೆಚ್ಚು ಬೆಲೆ ಕೊಡುತ್ತಿರಲಿಲ್ಲ. ಅವರಿಗೆ ಮಾತಾಡಲು ಬಿಡದೆ, ಇವರ ಮಾತನ್ನು ಕೇಳಬೇಕಾದ ಅಗತ್ಯವೇ ಇಲ್ಲ ಎಂಬಂತೆ ತಾವೇ ಮಾತಾಡುತ್ತಿದ್ದರಂತೆ. ಆದರೆ ಹಳ್ಳಿಯ ಜನ ಬಂದರೆ, ಹಳ್ಳಿ ಹಾಡುಗಳನ್ನು ಹೇಳುವವರು ಬಂದರೆ, ಗಂಟೆಗಟ್ಟಲೆ ನಿಷ್ಠೆಯಿಂದ ಅವರ ಮಾತು ಕೇಳುತ್ತಾ ಕೂತಿರುತ್ತಿದ್ದರಂತೆ. ಈ ಮಾತನ್ನು ಕೀರ್ತಿನಾಥ ಕುರ್ತಕೋಟಿ ಎಲ್ಲೋ ಉಲ್ಲೇಖಿಸುತ್ತಾರೆ. ಎಲ್ಲಿ ಎಂದು ನೆನಪಿಗೆ ಬರುತ್ತಿಲ್ಲ.  ಪುಸ್ತಕದ ಬದನೇಕಾಯಿಗಳಾದ ಈ ಅಕಡೆಮಿಕ್ ಜನರಿಂದ ಕಲಿಯುವುದು ಏನೂ ಇಲ್ಲ, ಆದರೆ ಸ್ವಂತ ಅನುಭವದ ಮಾತು ಹೇಳುವ ಹಳ್ಳಿ ಜನರಿಂದ ಕಲಿಯುವುದು ಇದೆ ಎಂದು ಅವರಿಗೆ  ಅನ್ನಿಸಿರಬಹುದು.

ಸ್ವವಿಮರ್ಶೆ ಹೆಚ್ಚಿಸದ ವಿಮರ್ಶೆಯಿಂದ ಲೇಖಕನಿಗೆ ಆಗಬೇಕಾದ್ದು ಏನೂ ಇಲ್ಲ. ಅಂಥಾ ವಿಮರ್ಶೆ ಬರೀ ತರಲೆ.

Tuesday, November 22, 2011

ಇಕ್ಬಾಲ್ ಅಹ್ಮದ್ ಮತ್ತು ಹ್ಯಾಮ್ಲೆಟ್

ನಾನು ಹ್ಯಾಮ್ಲೆಟ್ ಅನುವಾದಿಸಿದ್ದು 1978ರಲ್ಲಿ. ಅದರ ನಂತರದ ಈ ಮೂವತ್ತಮೂರು ವರ್ಷಗಳಲ್ಲಿ ಅದನ್ನು ಬೇರೆ ಬೇರೆಯವರು ಆಡಿದ್ದಾರೆ; ರೇಡಿಯೋದಲ್ಲಿ ಪ್ರಸಾರ ಮಾಡಿದ್ದಾರೆ. ಆದರೆ ಅದರ ಬಗ್ಗೆ ನಿರಂತರವಾಗಿ ಅಭಿಮಾನ ಇಟ್ಟುಕೊಂಡು ಆಡುತ್ತಾ ಬಂದವರು ರಂಗ ನಿರ್ದೇಶಕ, ಚಿತ್ರಕಾರ, ಲೇಖಕ ಇಕ್ಬಾಲ್ ಅಹ್ಮದ್. ಇತ್ತೀಚೆಗೆ ಕಿನ್ನರ ಮೇಳಕ್ಕಾಗಿ ಅವರು ಅದನ್ನು ಮತ್ತೆ ಆಡಿಸಿದ್ದಾರೆ. ನಮ್ಮ ಜಾನಪದ ಹಾಗೂ ಪಾಶ್ಚಾತ್ಯ ಆಂಗಿಕಗಳನ್ನು ಮೇಳೈಸಿ ಮಾಡಿದ ಈ ಪ್ರಯೋಗ ನನಗಂತೂ ಖುಷಿ ಕೊಟ್ಟಿತು. ಈ ಸಂದರ್ಭದಲ್ಲಿ ಹ್ಯಾಮ್ಲೆಟ್  ಬಗ್ಗೆ ಆರು ವರ್ಷಗಳ ಹಿಂದೆ ಇಕ್ಬಾಲ್ ಬರೆದ ಲೇಖನವನ್ನು ಇಲ್ಲಿ ಸಾದರ ಪಡಿಸುತ್ತಿದ್ದೇನೆ. ಈ ಪ್ರತಿಭಾವಂತ ಸ್ನೇಹಿತ ಎಷ್ಟು ಒಳ್ಳೆಯ ಲೇಖಕ ಎಂಬುದನ್ನು ತೋರಿಸುವುದು ಒಂದು ಉದ್ದೇಶ; ಇವರ ಈ ಮೆಚ್ಚುವಿಕೆಯಿಂದ ನನಗಾದ ಸಂತೋಷ ಹಂಚಿಕೊಳ್ಳುವುದು ಇನ್ನೊಂದು ಉದ್ದೇಶ.
ಇದು ಅವರ ಲೇಖನ:


Thursday, November 17, 2011

ವಿರಾಮದ ಬಳಿಕ

ಸುಮಾರು ಮೂರು ವಾರಗಳಿಂದ ಇಂಟರನೆಟ್ ಹಾಳಾಗಿ ನನಗೆ ಬ್ಲಾಗ್ ಬರೆಯುವುದಕ್ಕಾಗಲೀ ಮೇಲ್ ನೋಡುವುದಕ್ಕಾಗಲೀ ಆಗಿರಲಿಲ್ಲ. ಹಾಳಾಗಲು ಕಾರಣ ಸಿಡಿಲು. ಈ ವರ್ಷ ಮಳೆಗಾಲಕ್ಕೆ ಮೊದಲು ಮತ್ತು ಆ ಮೇಲೆ ತುಂಬಾ ಹೊತ್ತು ತುಂಬಾ ದಿವಸ ನಿರಂತರವಾಗಿ ಸಿಡಿಲು ಗುಡುಗು. ಇಂಥಾ ಗುಡುಗು ಸಿಡಿಲಿಗೆ ಡಿಸಿಕನೆಕ್ಟ್ ಮಾಡಿದರೂ ಇಲೆಕ್ಟ್ರಾನಿಕ್ ಗೂಡ್ಸುಗಳು ಸುಟ್ಟು ಹೋಗುತ್ತವೆ. ಬೇಗ ರಿಪೇರಿ ಮಾಡಲು ಸಾಧ್ಯ, ಸಂಬಂಧ ಪಟ್ಟವರು ಮನಸ್ಸು ಮಾಡಿದರೆ. ಅಂತೂ ನಿನ್ನೆ ನನ್ನದು ರಿಪೇರಿಯಾಗಿದೆ.

ಈ ಅವಧಿಯಲ್ಲಿ ಬಿಟ್ಟು ಹೋಗಿರುವುದರ ಕುರಿತು ಬರೆಯಬೇಕಾಗಿದೆ. ಮೊದಲು ಮೇಲಿಗೆ ಉತ್ತರಿಸಬೇಕು.