ನನಗೆ ಇಷ್ಟವಾದ ನನ್ನ ಬರೆಹದ ಬಗ್ಗೆ ಬರೆಯುವುದು ಕಷ್ಟ. ಮೊದಲನೆಯ ಕಾರಣ, ಬರೆಯುವಾಗ ಪ್ರತಿ ಬರೆಹ ಇಷ್ಟವಾಗಿರುತ್ತದೆ. ಸುರು ಮಾಡುವ ಮೊದಲು ಆ ಬರೆಹಕ್ಕೆ ಕಾರಣವಾದ ಯಾವುದೋ ಒಂದು ಅಂಶ ಮನಸ್ಸನ್ನು ಹಿಡಿದಿರುತ್ತದೆ, ಕಾಡಿರುತ್ತದೆ. ಉದಾಹರಣೆಗೆ ಇತ್ತೀಚೆಗೆ ಪ್ರಕಟವಾದ ನನ್ನ ನಾಟಕ "ರಾಹು ಮತ್ತು ಕೇತು"ವಿನಲ್ಲಿ ನನ್ನನ್ನು ಕಾಡಿದ್ದು ಆ ಪುರಾಣದ ಕತೆಯಲ್ಲಿರುವ ವಿರುದ್ಧಾರ್ಥಗಳನ್ನು ಒಟ್ಟಿಗೇ ಹೊಮ್ಮಿಸುವ ಶಕ್ತಿ. ರಾಹು ಮತ್ತು ಕೇತು ಒಬ್ಬನೇ ವ್ಯಕ್ತಿ; ಅಮರನಾಗಬೇಕೆಂದು ಸುರರ ಸಾಲಿನಲ್ಲಿ ಕದ್ದುಮುಚ್ಚಿ ಕೂತು ಅಮೃತ ಕುಡಿಯಲು ಪ್ರಯತ್ನಿಸಿದ; ಅವನು ಅಮರನಾಗಬಾರದೆಂದು ಅಮೃತ ಹಂಚುತ್ತಿದ್ದ ಸೌಟಿನಿಂದ ದೇವರು ಅವನ ತಲೆ ಕತ್ತರಿಸಿದ. ಪರಿಣಾಮವಾಗಿ ಒಬ್ಬನೇ ವ್ಯಕ್ತಿ ರುಂಡ ಮುಂಡ ಬೇರ್ಪಟ್ಟು ವಿಚ್ಛಿದ್ರನಾದ. ಹೀಗೆ ರಾಹು/ಕೇತುವನ್ನು ಸೋಲಿಸಬೇಕೆಂಬ ದೇವರ ಆಸೆ ಪೂರೈಸಿತು. ಆದರೆ ಸೌಟಲ್ಲಿದ್ದ ಅಮೃತ ದೇಹವನ್ನು ಸೇರಿದ್ದರಿಂದ ರಾಹು/ಕೇತುವಿನ ಅಮರನಾಗಬೇಕೆಂಬ ಆಸೆಯೂ ಪೂರೈಸಿತು. ಇಲ್ಲಿ ದೇವರು ಮತ್ತು ರಾಹು--ಇಬ್ಬರೂ ಗೆದ್ದಿದ್ದಾರೆ, ಇಬ್ಬರೂ ಸೋತಿದ್ದಾರೆ.
ನನ್ನ ನಾಟಕದಲ್ಲಿ ತಲೆಯಾದ ರಾಹು ಮಾತಾಡುತ್ತಿದ್ದಾನೆ, ಯೋಚಿಸುತ್ತಿದ್ದಾನೆ; ಸುಂದರ ಸಮಾಜದ ಕನಸು ಕಾಣುತ್ತಿದ್ದಾನೆ. ತಲೆಯಿಲ್ಲದ ಮುಂಡ ಮಾತ್ರವಾದ ಕೇತು ಕ್ರಿಯೆಯಲ್ಲಿ ತೊಡಗಿದ್ದಾನೆ. ಮುಂಡವಿಲ್ಲದ ರಾಹು ಕ್ರಿಯೆಯಲ್ಲಿ ತೊಡಗಲಾರ; ರುಂಡವಿಲ್ಲದ ಕೇತು ಯೋಚಿಸಲಾರ, ವಿವೇಚಿಸಲಾರ. ಇಂದಿನ ಬುದ್ಧಿಜೀವಿಗಳ ಮತ್ತು ಕ್ರಿಯೆಯಲ್ಲಿ ತೊಡಗಬಲ್ಲವರ ಮಧ್ಯದ ಕಂದರವನ್ನು ಈ ಮೆಟಫರ್ ಸಮರ್ಥವಾಗಿ ಬಿಂಬಿಸುತ್ತದೆ ಅನ್ನಿಸಿತು. ಆದರೆ ನನಗೆ ಈ ನಾಟಕ ಇಷ್ಟವಾಗಲು ಇನ್ನೂ ಒಂದು ಕಾರಣ--ಅದು ವಾಚಿಕವನ್ನು ಅವಲಂಬಿಸಿದ ನಾಟಕ. ಇಂದಿನ ರಂಗಭೂಮಿಯಲ್ಲಿ ಏಕ್ಷನ್ ತುಂಬಾ ಇದೆ, ಅದರ ಪರಿಣಾಮವಾಗಿ ವಾಚಿಕ ಎರಡನೆಯ ಸ್ಥಾನಕ್ಕೆ ಸರಿದಿದೆ ಎಂದು ಅನೇಕ ಸಲ ಅನ್ನಿಸುತ್ತಿತ್ತು. ವಾಚಿಕಕ್ಕೇ ಪ್ರಮುಖ ಸ್ಥಾನ ಇರುವ ಒಂದು ನಾಟಕ ಬರೆಯಬೇಕು ಎಂದೂ ಅನ್ನಿಸುತ್ತಿತ್ತು. "ರಾಹು ಮತ್ತು ಕೇತು" ರಾಹು ಮಾಡುವ ವಿವಿಧ ಧ್ವನಿಗಳನ್ನು ಮತ್ತು ಅದರಿಂದ ಹುಟ್ಟುವ ಪ್ರತಿಧ್ವನಿಗಳನ್ನು ಅವಲಂಬಿಸಿದ ನಾಟಕ. ಅದು ಬೊಂಬೆಯಾಟವಾದ್ದರಿಂದ ಮುಖಮುದ್ರೆ ಮೊದಲಾದವುಗಳಿಗೆ ಅವಕಾಶವಿಲ್ಲ. ಕ್ರಿಯೆ ಇದೆ--ಕೇತು ಮಾಡುವಂಥಾದ್ದು. ಆದರೆ ಇದು ಮಾತಿನ ಜೊತೆಗೆ ತಾಳಮೇಳ ಇಲ್ಲದ, ಮೆದುಳಿನ ನಿಯಂತ್ರಣ ಇಲ್ಲದ ಕೇತುವಿನ ಕ್ರಿಯೆ. ಹೀಗಾಗಿ ಮುಖ್ಯ ಭಾಗಗಳನ್ನು ಧ್ವನಿಯ ಏರಿಳಿತಗಳಿಂದ ಕೂಡಿದ ವಾಚಿಕವೇ ನಿಭಾಯಿಸಬೇಕು. ಹೀಗೆ ಇಂದಿನ ದಿನಗಳಲ್ಲಿ ವಾಚಿಕಕ್ಕೆ ಪ್ರಾಮುಖ್ಯತೆ ಇರುವ ಒಂದು ನಾಟಕ ಬರೆದೆ ಎಂಬುದೂ "ರಾಹು ಮತ್ತು ಕೇತು" ಇಷ್ಟವಾಗಲು ಕಾರಣ. ಮುಖ್ಯವಾಹಿನಿಯಿಂದ ದೂರ ಸರಿದು ಕೆಲಸ ಮಾಡಿದಾಗ ಸಹಜವಾಗಿಯೇ ಖುಷಿಯಾಗುತ್ತದೆ--ಯಾರೂ ಮಾಡದ್ದು ಮಾಡಲು ಪ್ರಯತ್ನಿಸಿದೆ ಎಂದು.
ಇತ್ತೀಚೆಗೆ ಪ್ರಕಟವಾದ ನನ್ನ ಸಮಗ್ರ ನಾಟಕಗಳ ನಾಲ್ಕನೇ ಸಂಪುಟದಲ್ಲಿರುವ "ಡಾಗ್ ಶೋ" ಸಹಾ ನನಗೆ ಇಷ್ಟವಾದ ಇನ್ನೊಂದು ಬರೆಹ. ಇದು ನಾಯಿಗಳೇ ಪಾತ್ರವಾಗುಳ್ಳ ಗೀತ ನೃತ್ಯ ನಾಟಕ. ಶಿವರಾಮ ಕಾರಂತ, ಪು. ತಿ. ನರಸಿಂಹಾಚಾರ್ ಮೊದಲಾದವರ ಗೀತ ನಾಟಕ ಓದಿದಾಗಿನಿಂದ ಹೊಸ ಬಗೆಯ ಗೀತ ನಾಟಕ ಬರೆಯಬೇಕೆಂದು ಮನಸ್ಸಿನಲ್ಲಿ ಇತ್ತು. ಜೊತೆಗೆ ನಮ್ಮ
ಪಂಚತಂತ್ರ ಮೊದಲಾದ ಪ್ರಾಚೀನ ಕೃತಿಗಳ ಪರಂಪರೆಗೆ ಹಿಂದಿರುಗಿ ಹೊಸ ಒಂದು ಪ್ರಕಾರ ನಿರ್ಮಿಸಿಕೊಳ್ಳಬೇಕೆಂದು ಸಾಕಷ್ಟು ಸಮಯದಿಂದ ಬೇರೆ ಬೇರೆ ಪ್ರಯೋಗಗಳನ್ನು ಮಾಡುತ್ತಿದ್ದೆ. ಪರಂಪರೆಗೆ ಹಿಂದಿರುಗಿ ಮತ್ತೆ ನಮ್ಮ ಬೇರುಗಳನ್ನು ಕಂಡುಕೊಂಡು ಪಾಶ್ಚಾತ್ಯ ಕೃತಿಗಳಿಂದ ನಿರ್ದೇಶಿತವಾದ ಮನಸ್ಸನ್ನು ಬಿಡುಗಡೆಗೊಳಿಸಿಕೊಳ್ಳಬೇಕು ಎಂಬ ಆಸೆಯನ್ನು ಅನೇಕ ದೃಷ್ಟಿಗಳಲ್ಲಿ "ಡಾಗ್ ಶೋ"ದಲ್ಲಿ ನೆರವೇರಿಸಿದ್ದೇನೆ ಅಂದುಕೊಂಡಿದ್ದೇನೆ. ಹೀಗಾಗಿಯೂ ಅದು ಇಷ್ಟವಾಯಿತು.
ಇತ್ತೀಚೆಗೆ ಬರೆದದ್ದು ಎಂಬ ಕಾರಣಕ್ಕಾಗಿ ಹೆಚ್ಚು ಇಷ್ಟವಾಗುತ್ತದೆಯೇ? ಲೇಖಕರಿಗೆ ತಮ್ಮ ಇತ್ತೀಚಿನ ಕೃತಿ ಹೆಚ್ಚು ಇಷ್ಟವಾಗುವುದು ಸಹಜ. ಯಾಕೆಂದರೆ ಅದನ್ನು ವಸ್ತುನಿಷ್ಠವಾಗಿ ನೋಡುವ ದೂರ ಇನ್ನೂ ಲಭಿಸಿರುವುದಿಲ್ಲ. ಆದರೆ ಬರೆದ ಕೂಡಲೇ ನಾನು ನನ್ನ ಕೃತಿಗಳನ್ನು ಪ್ರಕಟಿಸುವುದಿಲ್ಲ. ಕನಿಷ್ಠ ಒಂದು ವರ್ಷ ಹಾಗೇ ಒಂದು ಕಡೆ ಇಟ್ಟುಬಿಡುತ್ತೇನೆ. ಈಗ ನಾನು ಕಂಪ್ಯೂಟರಿನಲ್ಲಿ ಬರೆವಣಿಗೆ ಮಾಡುವುದರಿಂದ ಆ ಫೈಲು ಓಪನ್ ಮಾಡದೆ ಹಾಗೇ ಬಿಟ್ಟುಬಿಡುತ್ತೇನೆ. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಳೆದ ಮೇಲೆ ಓದಿದಾಗ ಅದರ ಅರೆಕೊರೆಗಳು, ಅದರ ಸಾಹಿತ್ಯಿಕ ಯೋಗ್ಯತೆ ಗೊತ್ತಾಗುತ್ತದೆ. ಯಾಕೆಂದರೆ ಅಷ್ಟು ಸಮಯ ಆ ಕೃತಿಯಿಂದ ದೂರವಿದ್ದು ಓದಿದಾಗ ನಾನೂ ಇನ್ನೊಬ್ಬ ಓದುಗನಂತೆಯೇ ಆಗಿರುತ್ತೇನೆ: ಅದರ ಬಗ್ಗೆ ಸ್ಪಷ್ಟವಾಗಿ ಯೋಚಿಸಲು ಬೇಕಾದ ದೂರ ಲಭಿಸಿರುತ್ತದೆ.
ಸ್ನೇಹಿತರಿಗೋ ಬೇರೆ ಇನ್ನೊಬ್ಬರಿಗೋ ತೋರಿಸಿ ಅವರ ವಿಮರ್ಶೆಯ ಮೇಲಿಂದ ತಿದ್ದುವ ಕೆಲಸ ಅಷ್ಟೇನೂ ಒಳ್ಳೆಯದಲ್ಲ ಎಂದು ನನ್ನ ಬರೆವಣಿಗೆಯ ಮೊದಲ ವರ್ಷಗಳಲ್ಲೇ ಅನ್ನಿಸಿತು. ನಾನು ಏನು ಮಾಡಲು ಬಯಸುತ್ತೇನೆ ಎನ್ನುವುದು ಸ್ನೇಹಿತನಿಗೋ ಇನ್ನೊಬ್ಬ ಲೇಖಕನಿಗೋ ಹೇಗೆ ಗೊತ್ತಾಗುತ್ತದೆ? ಹೆಚ್ಚೆಂದರೆ ಅವನಿಗೆ ಕೆಲವಂಶಗಳು ಮಾತ್ರ ಗೊತ್ತಾಗಬಹುದು. ಅದು ಪೂರ್ತಿಯಾಗಿ ನನಗೆ--ಬರೆದವನಿಗೆ--ಮಾತ್ರ ಗೊತ್ತಾಗಲು ಸಾಧ್ಯ. ಆದ್ದರಿಂದ ಸ್ವವಿಮರ್ಶೆಯೇ ಸರಿಯಾದ ವಿಮರ್ಶೆ. ಸ್ವವಿಮರ್ಶೆ ಮಾತ್ರ ಒಬ್ಬ ಲೇಖಕನಿಗೆ ಉಪಯೋಗಕ್ಕೆ ಬರುವಂಥಾದ್ದು. ಇತ್ತೀಚೆಗೆ ಪ್ರಕಟಿಸಿದ ನನ್ನ ಎಲ್ಲಾ ಕೃತಿಗಳು ಬರೆದು ತುಂಬಾ ಸಮಯ ಹಾಗೇ ಇಟ್ಟು ತಿದ್ದಿ ಮತ್ತೆ ಹಾಗೇ ಬಿಟ್ಟು ಓದಿ ತಿದ್ದಿ ಪ್ರಕಟಿಸಿದವಾದ್ದರಿಂದ ಅವುಗಳ ಬಗ್ಗೆ ಸಹಜವಾಗಿಯೇ ನನಗೆ ಹೆಚ್ಚಿನ ಆತ್ಮವಿಶ್ವಾಸವಿದೆ.
ನನಗೆ ಒಟ್ಟಾಗಿ ಒಂದು ಮೆಟಫರ್ ಆಗುವ ಕೃತಿಗಳು ಇಷ್ಟ. ನಾನು ಮೆಚ್ಚುವ ಬೇರೆಯವರ ಕೃತಿಗಳೂ ಅಂಥವೇ: ಒಂದು ಅಥವಾ ಅದಕ್ಕಿಂತ ಹೆಚ್ಚು ಕೇಂದ್ರ ಮೆಟಫರುಗಳು ಇದ್ದು ಆ ಮೂಲಕ ಅರ್ಥಪರಂಪರೆಯನ್ನು ಬಿಟ್ಟುಕೊಡುವ ಕೃತಿಗಳು ಹೆಚ್ಚು ಅರ್ಥಪೂರ್ಣ ಅನ್ನಿಸುತ್ತದೆ. ನಾನು ನನ್ನ ಬರೆವಣಿಗೆಯಲ್ಲಿ ಪ್ರಯತ್ನಿಸುವುದೂ ಇಂಥದ್ದನ್ನು ಸಾಧಿಸುವುದಕ್ಕಾಗಿ. ಒಟ್ಟಾಗಿ ಒಂದು ಸೃಜನಶೀಲ ಕೃತಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮೆಟಫರನ್ನು ಹೊಂದಿರಬೇಕು; ಆ ಮೆಟಫರ್ ಇಡೀ ಕೃತಿಯನ್ನು ವ್ಯಾಪಿಸಿರಬೇಕು; ಆ ಕೇಂದ್ರ ಮೆಟಫರಿಗೆ ಹೊಂದುವಂತೆ ಇತರ ವಿವರಗಳು ಸೇರಬೇಕು; ಸೇರಿ ಕೃತಿಯಲ್ಲಿ ವಿವಿಧ ಅರ್ಥದ ಪದರಗಳನ್ನು ಸೃಷ್ಟಿಸಬೇಕು--ಇದು ನನ್ನ ಬರೆವಣಿಗೆಯನ್ನು ನಿರ್ದೇಶಿಸುವ ಈಸ್ಥೆಟಿಕ್ಸ್. ಉದಾಹರಣೆಗೆ
ರಥಮುಸಲ ದಲ್ಲಿ ರಥಮುಸಲ ಕೇಂದ್ರ ಮೆಟಫರ್. ಅದು ಸುತ್ತ ಶಸ್ತ್ರಗಳನ್ನು ಕಟ್ಟಿದ ರಥ. ಸಾರಥಿ ಅದರೊಳಗೆ ಅಡಗಿ ಕೂತು ರಥ ನಡೆಸುತ್ತಿದ್ದ. ರಥ ಹೇಗೆ ನಡೆಯುತ್ತಿದೆಯೆಂದು ಗೊತ್ತಾಗುವುದರೊಳಗೆ ರಥದ ಸುತ್ತ ಕಟ್ಟಿದ ಕತ್ತಿಗೆ ವೈರಿ ಬಲಿಯಾಗಿರುತ್ತಿದ್ದ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ವೈಶಾಲಿಯ ಜನರ ಈ ಯುದ್ಧಶಸ್ತ್ರ ಇಂದಿನ ಮುಚ್ಚಿ ಬರುವ ವಸಾಹತುಶಾಹಿಗೆ ಒಳ್ಳೆಯ ರೂಪಕ ಎಂದು 1970ರ ಕೊನೆಯ ಹೊತ್ತಿಗೆ ಆ ನಾಟಕ ಬರೆಯಲು ಸುರುಮಾಡಿದಾಗ ಅನ್ನಿಸಿತು. ಯಾರು ಏನೆಂದು ಗೊತ್ತಿಲ್ಲದಿರುವುದು, ಗೊತ್ತಾಗುವುದರೊಳಗೆ ಪಾತ್ರಗಳು ಯಾವುದೋ ಪಿತೂರಿಯ ಭಾಗವಾಗಿರುವುದು, ವೇಷ ಮರೆಸಿಕೊಂಡು ವ್ಯವಹರಿಸುವುದು, ಗೂಢಚಾರಿಕೆ ಮೊದಲಾದ ವಿವರಗಳು ಈ ಕೇಂದ್ರ ಮೆಟಫರನ್ನು ಪೋಷಿಸಿದವು. ನನ್ನ ಸಣ್ಣಕತೆ "ರಿಸಾರ್ಟ್" ನಲ್ಲಿ ಅರಮನೆ/ರಿಸಾರ್ಟ್ ಕೇಂದ್ರ ಮೆಟಫರ್. ಅಥವಾ
ಕುದುರೆ ಬಂತು ಕುದುರೆಯಲ್ಲಿ ಕುದುರೆ ಕೇಂದ್ರ ಮೆಟಫರ್. ಕೋಲನ್ನು ಕುದುರೆಯೆಂದು ತಿಳಿದು ಆಡುವ ಹುಡುಗ, ಸಿನೆಮಾದ ಕುದುರೆ, ಕೀಲು ಕುದುರೆ, ಕಲಿಪುರುಷ ಕೂತುಕೊಂಡು ಬರುವ ಕುದುರೆ--ಹೀಗೆ ಬೇರೆ ಬೇರೆ ಬಗೆಯ ಕುದುರೆಗಳು ಬಂದು ಅರ್ಥದ ಪದರಗಳನ್ನು ಸೃಷ್ಟಿಸುತ್ತವೆ. ಬರೆಯಲು ಪ್ರಾರಂಭಿಸಿದ ಮೇಲೆ ಕೆಲವು ಪುಟ ಬರೆಯುವುದರೊಳಗೆ ಮೆಟಫರುಗಳು ಸಹಜವಾಗಿ ಮೂಡುತ್ತಿಲ್ಲ, ಹಾಗೆ ಮೂಡಿ ವಿವಿಧ ಅರ್ಥಗಳನ್ನು ಹೊಮ್ಮಿಸಲು ಸಾಧ್ಯ ಆಗುತ್ತಿಲ್ಲ ಎಂದಾದರೆ ನನಗೆ ಆ ಕೃತಿಯ ಬರೆವಣಿಗೆ ಮುಂದುವರಿಸಿಕೊಂಡು ಹೋಗಲು ಆಗುವುದಿಲ್ಲ.
ನಾನು ಮೆಟಫರುಗಳನ್ನು ಹುಡುಕುವುದು, ಅವುಗಳನ್ನು ಪೋಷಿಸುವ ವಿವರಗಳನ್ನು ಅವುಗಳ ಸುತ್ತ ಕಟ್ಟುವುದು ಮೊದಲಾದವನ್ನು ಪ್ರಜ್ಞಾಪೂರ್ವಕವಾಗಿ ಮಾಡುವುದಿಲ್ಲ. ನನ್ನ ಮನಸ್ಸು ಸೃಷ್ಟಿಸುವ, ಅನುಭವಗಳನ್ನು ಸ್ವೀಕರಿಸುವ ಕ್ರಮವೇ ಹಾಗೆ--ಮೆಟಫರುಗಳ ಮೂಲಕ. ನನಗೆ ಒಂದು ಪದ್ಯ, ಕಥೆ ಅಥವಾ ನಾಟಕ ಬರೆಯುವುದೆಂದರೆ ನನ್ನ ಅನುಭವಕ್ಕೆ ಹೊಂದುವ ಮೆಟಫರ್ ಸೃಷ್ಟಿಸುವುದು; ಅಥವಾ ಪುರಾಣದಲ್ಲೋ ಇತಿಹಾಸದಲ್ಲೋ ಇರುವುದನ್ನು ಹೊಸ ಅರ್ಥವಂತಿಕೆಯಿಂದ ಮೆಟಫರ್ ಆಗಿ ಪರಿವರ್ತಿಸಿ ಬಳಸುವುದು. ನನ್ನ ಮಟ್ಟಿಗೆ ಮೆಟಫರುಗಳ ಸೃಷ್ಟಿಯೇ ಬರೆವಣಿಗೆ.
ಆದರೂ ನನಗೆ ಎಲ್ಲಾ ವಿವರಣೆ ಮೀರಿ ಇಷ್ಟವಾದ ಒಂದು ಪದ್ಯವಿದೆ. ಇದು "ಬೇಸಿಗೆಯ ನಡುಹಗಲು" ಎಂಬ ಹೆಸರಿನ ಪದ್ಯ. ಇದು ನನ್ನ ಸಂಗ್ರಹ
ಮಾತಾಡುವ ಮರದ ಮೊದಲ ಪದ್ಯವಾಗಿ ಪ್ರಕಟವಾಗಿದೆ. ಇದನ್ನು ನಾನು ಪಂಜ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನನ್ನ ಹದಿನಾರನೇ ವಯಸ್ಸಿನಲ್ಲಿ ಬರೆದೆ. ಆಗ ಅದು ಬಾಕಿನ ಸಂಪಾದಿಸಿ ಪ್ರಕಟಿಸುತ್ತಿದ್ದ ತ್ರೈಮಾಸಿಕ
ಕವಿತಾದಲ್ಲಿ ರಾಮಚಂದ್ರ ಶರ್ಮರ "ಹೆಸರಗತ್ತೆ". ಜಿ. ಎಸ್. ಶಿವರುದ್ರಪ್ಪನವರ ಒಂದು ಪದ್ಯ ಪ್ರಕಟವಾದ ಸಂಚಿಕೆಯಲ್ಲಿ ಅವರ ಕವನಗಳ ಜೊತೆ ಪ್ರಕಟವಾಗಿತ್ತು. ಈ ಬಗ್ಗೆ ನನಗೆ ಹೆಮ್ಮೆಯಿದೆ. ಆಗ ನಾನು ತುಂಬಾ ಪದ್ಯ ಪ್ರಕಟಿಸುತ್ತಿದ್ದೆ.
ಸಂಕ್ರಮಣ, ಖಾದ್ರಿ ಶಾಮಣ್ಣನವರ ಸಂಪಾದಕತ್ವದ ಕವಿತೆಗಾಗಿಯೇ ಒಂದು ಪುಟ ಮೀಸಲಿಟ್ಟಿದ್ದ
ಗೋಕುಲ ವಾರಪತ್ರಿಕೆ ಮೊದಲಾದೆಡೆ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ನನ್ನ ಪದ್ಯಗಳು ಪ್ರಕಟವಾಗಿವೆ. ಆದರೆ ಯಾರಿಗೂ ನಾನು ಹೈಸ್ಕೂಲು ವಿದ್ಯಾರ್ಥಿ ಎಂದು ತಿಳಿಸುತ್ತಿರಲಿಲ್ಲ. ತಿಳಿಸಿದರೆ ಪತ್ರಿಕಾಸಂಪಾದಕರು ನನ್ನನ್ನು ಗಂಭೀರವಾಗಿ ತೆಗೆದುಕೊಳ್ಳಲಾರರು, ಓದಲಾರರು, ಪ್ರಕಟಿಸಲಾರರು ಎಂಬ ಅಳುಕು ಇತ್ತು. ರಾಮಚಂದ್ರಯ್ಯ, ಲ್ಯಾಂಡ್ ಲಾರ್ಡ್, ರಾಮತ್ತಿಕಾರಿ ಎಸ್ಟೇಟ್ ಎಂದು ವಿಳಾಸ ಬರೆದು ಪದ್ಯ ಕಳಿಸುತ್ತಿದ್ದೆ. ಲ್ಯಾಂಡ್ ಹೋಗಲಿ, ಆಗ ನನಗೆ ಚಪ್ಪಲಿ ಕೂಡಾ ಇರಲಿಲ್ಲ. ಆದರೆ ಬರಿಗಾಲಿನಲ್ಲಿ ನಡೆಯುತ್ತಿದ್ದೆ ಎನ್ನುವುದು ದೊಡ್ಡ ವಿಷಯ, ಕೊರತೆ ಅನ್ನಿಸುತ್ತಿರಲಿಲ್ಲ. ನಮ್ಮ ತಂದೆ ತಾಯಿ ಸೇರಿದಂತೆ ಅನೇಕರು ಬರಿಗಾಲಿನಲ್ಲಿ ನಡೆಯುತ್ತಿದ್ದರು. ಆದರೆ ಲ್ಯಾಂಡ್ ಲಾರ್ಡ್ ಆದ್ದರಿಂದ ಚಂದಾ ಕೊಟ್ಟಾನೆಂದೋ ಏನೋ--ಅಂತೂ ಪದ್ಯ ಪ್ರಕಟಿಸುತ್ತಿದ್ದರು. ಹೀಗೆ ಪ್ರಕಟವಾದ್ದರಿಂದ ಊರಿನ ಮತ್ತು ಶಾಲೆಯ ಯಾರಲ್ಲೂ ಇಲ್ಲದ್ದೊಂದು ನನ್ನಲ್ಲಿದೆ, ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ನನ್ನ ಪದ್ಯ ಪ್ರಕಟವಾಗಿದೆ ಎಂಬ ಆತ್ಮವಿಶ್ವಾಸ ಬೆಳೆದಿತ್ತು. ಸೊಕ್ಕೂ ಸಖತ್ತಾಗಿತ್ತು.
ಆದರೆ ಪದ್ಯ ಈಗಲೂ ಇಷ್ಟವಾಗುತ್ತಿರುವುದು ಹೈಸ್ಕೂಲಲ್ಲಿ ಇದ್ದಾಗ ಬರೆದೆ ಎಂಬ ಕಾರಣಕ್ಕ ಮಾತ್ರವೇ ಅಲ್ಲ. ಆಗ ನಾನು ದಿನಾ ಐದು ಮೈಲು ಬೆಳಿಗ್ಗೆ ಐದು ಮೈಲು ಸಂಜೆ ನಡೆದುಕೊಂಡು ಕಲ್ಮಡ್ಕದ ಮನೆಯಿಂದ ಪಂಜಕ್ಕೆ ಹೈಸ್ಕೂಲಿಗೆ ಹೋಗಿ ಬರುತ್ತಿದ್ದೆ. ಜನವರಿಯಿಂದ ಮಾರ್ಚ್ ಕೊನೆ ವರೆಗಂತೂ ತುಂಬಾ ಸೆಕೆ, ಬಿಸಿಲು, ಧೂಳು. ಶನಿವಾರ ಮಧ್ಯಾಹ್ನದ ವರೆಗೆ ಮಾತ್ರ ಶಾಲೆ ಇರುತ್ತಿದ್ದುದರಿಂದ ಮಧ್ಯಾಹ್ನದ ಬಿಸಿಲಲ್ಲಿ ನಡೆದುಕೊಂಡು ಬರಬೇಕಾಗಿತ್ತು. ಈಗ ಓದಿದಾಗ ಆ ಪದ್ಯದಲ್ಲಿ ಆ ದಿನಗಳ ನನ್ನ ಬಿಸಿಲಿನ ಸೆಖೆಯ ಉರಿಯ ಅನುಭವ ಹೇಳಿದ್ದೇನೆ ಅನ್ನಿಸುತ್ತದೆ. ಹೀಗಾಗಿ ಇದು ಅತ್ಯಂತ ಖಾಸಗಿ ಪದ್ಯ. ಆದರೆ ನಡುಹಗಲಿನ ಬಗ್ಗೆ ಬರೆದ ವಸ್ತುನಿಷ್ಠ ಪದ್ಯ ಎಂದೂ ಅನ್ನಿಸುತ್ತದೆ. ಹೀಗೆ ಸ್ವಂತ ಅನುಭವವನ್ನು ವಸ್ತುನಿಷ್ಠ ಚಿತ್ರಣ ಎನ್ನಿಸುವ ಹಾಗೆ ಬರೆದಿದ್ದೇನೆಂದು ಇಷ್ಟವಾಗುತ್ತಿದೆ.
ಅಲ್ಲದೆ, ಬರಗಾಲ, ಬಿಸಿಲು, ಸೆಖೆ, ದಾಹ, ನೀರಿಲ್ಲದಿರುವಿಕೆಗಳ ಈ ವಸ್ತುವಿಗೆ ನಾನು ನನ್ನ ಬರೆವಣಿಗೆಯಲ್ಲಿ ಮತ್ತೆ ಮತ್ತೆ ಹಿಂದಿರುಗುತ್ತೇನೆ ಅನ್ನಿಸುತ್ತದೆ. "ದಂಗೆಯ ಪ್ರಕರಣ"ದಲ್ಲಿ ಸೆಖೆ ಬಿಸಿಲು ತಾಪಗಳ ವಿವರಣೆಯಿದೆ. ಇತ್ತೀಚಿನ "ಮಾತಾಡುವ ಮರ"ದಲ್ಲಿ ಮತ್ತೆ ನೀರಿಲ್ಲದಿರುವಿಕೆಯ ಚಿತ್ರಣ ಬರುತ್ತದೆ. ನನ್ನ ಬರೆವಣಿಗೆಯುದ್ದಕ್ಕೆ ಬೇರೆ ಕೃತಿಗಳಲ್ಲಿ ಸಹಾ ಬೆಳೆಯುತ್ತಾ ಬಂದ ವಸ್ತುವಿನ ಕುರಿತು ಬರೆದ ಮೊದಲ ಕೃತಿಯೆಂದೂ "ಬೇಸಿಗೆಯ ನಡುಹಗಲು" ಇಷ್ಟವಾಗುತ್ತಿದೆ.
ಮಂಗಳ ವಾರಪತ್ರಿಕೆ ಇತ್ತೀಚೆಗೆ "ನನಗೆ ಇಷ್ಟವಾದ ನನ್ನ ಬರೆಹ" ಎಂಬ ವಿಷಯ ಕುರಿತು ಬೇರೆ ಬೇರೆ ಲೇಖಕರು ಬರೆದ ಲೇಖನಮಾಲೆ ಪ್ರಕಟಿಸಿತು. ಇದು ಅದಕ್ಕಾಗಿ ಬರೆದ ಲೇಖನ.