ಕಲ್ಮಡ್ಕ ಒಂದು ಚಿಕ್ಕ ಹಳ್ಳಿ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿದೆ. ಇದರ ಜನಸಂಖ್ಯೆ ಸುಮಾರು ಒಂದೂವರೆ ಸಾವಿರ. ಆದರೆ ಇದು ಇಂದು ಯಕ್ಷಗಾನದ ಕೇಂದ್ರಗಳಲ್ಲಿ ಒಂದೆಂದು, ಯರ್ಮುಂಜ ರಾಮಚಂದ್ರರ ಕಥಾಸಂಕಲನವನ್ನು ಪ್ರಕಟಿಸಿದ ಪ್ರಕಾಶನ ಸಂಸ್ಥೆಯ ಊರೆಂದು ಹೆಸರು ಮಾಡಿದೆ. ಹೀಗೆ ಬಹಳ ಸಾಧಾರಣವಾದ ಹಳ್ಳಿಯೊಂದು ಸಾಂಸ್ಕೃತಿಕವಾಗಿ ಮುಖ್ಯ ಎನ್ನಿಸಿಕೊಳ್ಳಲು ಸುಮಾರು ಅರುವತ್ತೈದು ವರ್ಷಗಳ ಹಿಂದೆ ಇಲ್ಲಿಗೆ ಆಸ್ತಿ ಕೊಂಡು ನೆಲೆಸಲು ಬಂದ ಕೆರೆಕ್ಕೋಡಿ ಗಣಪತಿ ಭಟ್ಟ ಎಂಬವರು, ಮತ್ತು ಊರವರು ಅವರಿಗೆ ಕೊಟ್ಟ ಸಹಕಾರ, ಕಾರಣ. ಕೆರೆಕ್ಕೋಡಿ ಗಣಪತಿ ಭಟ್ಟರು ಅಡ್ಯನಡ್ಕ ಕಡೆಯವರು; ಇಲ್ಲಿಗೆ ಬಂದವರು ಇಲ್ಲಿ ಸಂಗಮ ಕಲಾ ಸಂಘ ಎಂಬ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರು. ಅದರ ಮೂಲಕ ಯಕ್ಷಗಾನ ಬಯಲಾಟ, ನಾಟಕ, ತಾಳಮದ್ದಳೆ ಮೊದಲಾದವನ್ನು ನಡೆಸುತ್ತಿದ್ದರು. ಪರದೆ ಬರೆಯುತ್ತಿದ್ದರು. ಸ್ವತಃ ಯಕ್ಷಗಾನ ಪ್ರಸಂಗಗಳನ್ನೂ ಬರೆದಿದ್ದರು. ಅವರಿಂದಾಗಿ ತೆಂಕುತಿಟ್ಟಿನ ಎಲ್ಲಾ ಪ್ರಸಿದ್ಧ/ಅಪ್ರಸಿದ್ಧ ಕಲಾವಿದರು ಕಲ್ಮಡ್ಕಕ್ಕೆ ಬಂದು ವೇಷ ಹಾಕಿದ್ದಾರೆ; ತಾಳಮದ್ದಲೆಯಲ್ಲಿ ಅರ್ಥ ಹೇಳಿದ್ದಾರೆ. ಹೀಗೆ ಆರೇಳು ವರ್ಷಗಳ ಕೆಳಗೆ ಇಳಿವಯಸ್ಸಿನಲ್ಲಿ ನಿಧನರಾಗುವ ವರೆಗೂ ಗಣಪತಿ ಭಟ್ಟರು ನಿರಂತರವಾಗಿ ಯಕ್ಷಗಾನಕ್ಕೆ ಸಂಬಂಧಪಟ್ಟ ಕೆಲಸವನ್ನು ಕಲ್ಮಡ್ಕ ಗ್ರಾಮದಲ್ಲಿ ಮಾಡಿಕೊಂಡು ಬಂದಿದ್ದಾರೆ. ಇದರಿಂದಾಗಿ ಈ ಊರಿನಲ್ಲೇ ಯಕ್ಷಗಾನದಲ್ಲಿ ಅರ್ಥ ಹೇಳುವವರ, ವೇಷ ಹಾಕುವವರ ಪಡೆಯೊಂದು ತಯಾರಾಗಿದೆ. ಬಹುಶಃ ಇಲ್ಲಿ ಬಾಲ್ಯ ಕಳೆದವರಲ್ಲಿ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳದ, ಒಮ್ಮೆ ಅಲ್ಲ ಒಮ್ಮೆಯಾದರೂ ವೇಷ ಹಾಕದ ತರುಣ ತರುಣಿಯರು ಇರಲಾರರು. ಅವರಲ್ಲಿ ಕೆಲವರು ಪ್ರಸಿದ್ಧರೂ ಇದ್ದಾರೆ. ಉದಾಹರಣೆಗೆ ತಾಳಮದ್ದಲೆಯಲ್ಲಿ ದೊಡ್ಡ ಹೆಸರಾಗಿರುವ ಉಡುವೆಕೋಡಿ ಸುಬ್ಬಪ್ಪಯ್ಯ ಇಲ್ಲಿ ತರಬೇತಿ ಪಡೆದವರು. ತಾಳಮದ್ದಲೆಯಲ್ಲಿ ತಮ್ಮದೇ ಶೈಲಿ ಬೆಳೆಸಿಕೊಂಡಿರುವ ಕೆಲವು ಮುಖ್ಯ ಕಲಾವಿದರಲ್ಲಿ ಅವರೊಬ್ಬರು.
ಕೆರೆಕ್ಕೋಡಿ ಗಣಪತಿ ಭಟ್ಟರಲ್ಲಿ ನನಗೆ ಇಷ್ಟವಾದದ್ದು ಅವರು ಹಠ ಹಿಡಿದು ಸಂಗಮ ಕಲಾಸಂಘವನ್ನು ಸ್ಥಳೀಯ ಸಂಸ್ಥೆಯಾಗಿಯೇ ಉಳಿಸಿಕೊಂಡದ್ದು. ನಾನು ಅವರಲ್ಲಿ ಒಮ್ಮೆ ಕರ್ನಾಟಕದಲ್ಲೇ ಆಗಲಿ ಹೊರಗೇ ಆಗಲಿ ಹೀಗೆ ಸುಮಾರು ಅರ್ಧ ಶತಮಾನಕ್ಕೂ ಮಿಕ್ಕಿ ಸಮಯದಿಂದ ಒಂದೇ ವಿಷಯದ ಬಗ್ಗೆ ಕೆಲಸ ಮಾಡುತ್ತಾ ಬಂದ ಸಂಸ್ಥೆಗಳು ವಿರಳ; ಇಂಥವುಗಳಿಗೆ ಗ್ರಾಂಟು ಕೊಡಲೆಂದು ರಾಜ್ಯ ಮತ್ತು ಕೇಂದ್ರ ಸರಕಾರ ಮಾತ್ರವಲ್ಲದೆ ಇಂಟರ್ರ್ನೇಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್, ಫೋರ್ಡ್ ಫೌಂಡೇಷನ್ನಿನಂಥಾ ಸಂಸ್ಥೆಗಳಲ್ಲಿ ಯೋಜನೆಗಳಿವೆ; ನೀವು ಇಷ್ಟಪಟ್ಟರೆ ಈ ಗ್ರಾಂಟುಗಳನ್ನು ಪಡೆಯುವುದು ಕಷ್ಟವಾಗಲಾರದು ಎಂದೆ. ಅವರು ಅದರ ಬಗ್ಗೆ ಯಾವ ಉತ್ಸಾಹವನ್ನೂ ತೋರಿಸಲಿಲ್ಲ. ತಮ್ಮ ಸಂಸ್ಥೆಯಲ್ಲಿ ಇತರರ ಹಸ್ತಕ್ಷೇಪ ಬೇಡ ಎಂದು ಅವರಿಗೆ ಅನ್ನಿಸಿರಬಹುದು. ಹಸ್ತಕ್ಷೇಪವಿಲ್ಲದೆ ಗ್ರಾಂಟು ಕೊಡುವ ಸಂಸ್ಥೆಗಳಿವೆ ಎಂದರೂ ಗಣಪತಿ ಭಟ್ಟರು ಅವುಗಳ ಮುಂದೆ ಕೈಚಾಚುವ ಮನಸ್ಸು ಮಾಡಲಿಲ್ಲ. ಬೇನಾಮಿ ಸಂಸ್ಥೆಗಳನ್ನು ಹುಟ್ಟುಹಾಕಿ ಹಣ ಮಾಡುವವರು ದಂಡಿಯಾಗಿರುವ ಈ ಕಾಲದಲ್ಲಿ ಗಣಪತಿ ಭಟ್ಟರ ಈ ನಿಲುವು ಅಪರೂಪದ್ದು. ಆದರೆ ಈ ನಿಲುವಿನಿಂದಾಗಿ ಸಂಸ್ಥೆಯ ಕಾರ್ಯಕ್ಷೇತ್ರ ಸೀಮಿತವಾಗಿದೆ.
ಸುಮಾರು 1954ನೇ ಇಸವಿ ಹೊತ್ತಿಗೆ, ಸಂಗಮ ಕಲಾಸಂಘದ ಅಂಗಸಂಸ್ಥೆಯಾಗಿ ಸಂಗಮ ಸಾಹಿತ್ಯ ಮಾಲೆ ಎಂಬ ಹೆಸರಿನ ಒಂದು ಪ್ರಕಾಶನ ಸಂಸ್ಥೆಯನ್ನು ಕಲ್ಮಡ್ಕದಲ್ಲಿ ಪ್ರಾರಂಭಿಸಲಾಯಿತು. ಇದರ ಸಂಪಾದಕರಾಗಿದ್ದವರು ಕೆ. ರಾಮಚಂದ್ರ, ಟಿ. ಜಿ. ಮುಡೂರು, ಮತ್ತು ಕೆರೆಕ್ಕೋಡಿ ಗಣಪತಿ ಭಟ್. ಇವರಲ್ಲಿ ಕೆ. ರಾಮಚಂದ್ರ ಮತ್ತು ಟಿ. ಜಿ. ಮುಡೂರು ಲೇಖಕರು. ಬಹುಶಃ ಅವರ ಆಸಕ್ತಿಯೇ ಪ್ರಕಾಶನ ಪ್ರಾರಂಭಿಸಲು ಕಾರಣ ಆಗಿರಬಹುದು. ಇವರ ಮೊದಲ ಪ್ರಕಟಣೆ
ಗೋಪಾಲಕೃಷ್ಣ ಎಂಬವರ ಕಾದಂಬರಿ ಬೆಳ್ಳಿಯ ಸೆರಗು. ಎರಡನೆಯ ಪ್ರಕಟಣೆ ಯರ್ಮುಂಜ ರಾಮಚಂದ್ರರ ಕಥಾಸಂಕಲನ ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು. ಈ ಪುಸ್ತಕದ ಬಗ್ಗೆ ಮುಂದೆ ಬರೆಯುತ್ತೇನೆ. ಅದಕ್ಕಿಂತ ಮೊದಲು ಸಂಪಾದಕರಾಗಿದ್ದ ಕೆ. ರಾಮಚಂದ್ರ ಮತ್ತು ಟಿ. ಜಿ ಮುಡೂರರ ಬಗ್ಗೆ ಬರೆಯಬೇಕು. ಮೊದಲು ರಾಮಚಂದ್ರರ ಬಗ್ಗೆ ಬರೆಯುತ್ತೇನೆ.
ರಾಮಚಂದ್ರ 1955ನೇ ಇಸವಿಯಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ. ಎ. ಇಂಗ್ಲಿಷ್ ಆನರ್ಸ್ ಓದುತ್ತಿದ್ದಾಗ ಟಿ. ಬಿ.ಯಿಂದಾಗಿ ನಿಧನರಾದರು. ಮಾನಸ ಗಂಗೋತ್ರಿ/ಮಹಾರಾಜಾ ಕಾಲೇಜಿನಲ್ಲಿ ನಮಗೆಲ್ಲಾ ಅಧ್ಯಾಪಕರೂ ಭಾರತದ ಇಂಗ್ಲಿಷ್ ಅಧ್ಯಾಪಕರಲ್ಲಿ ಹೆಸರು ಮಾಡಿದವರೂ ಆಗಿದ್ದ ಪ್ರೊ. ಸಿ. ಡಿ. ನರಸಿಂಹಯ್ಯನವರ ವಿದ್ಯಾರ್ಥಿಯಾಗಿದ್ದರು. ಅಂದರೆ ಆಧುನಿಕ ಇಂಗ್ಲಿಷ್ ಕಾವ್ಯವನ್ನು ಅಭ್ಯಾಸ ಮಾಡಿದವರು. ಡಾ. ರತ್ನ, ಹಾ. ಮಾ. ನಾಯಕ, ಕೆ. ವಿ. ಸುಬ್ಬಣ್ಣ, ಯು. ಆರ್.ಅನಂತಮೂರ್ತಿ ಮೊದಲಾದವರ ಓರಗೆಯವರು. ಅನಂತಮೂರ್ತಿಯವರ ಕ್ಲಾಸ್ಮೇಟ್. ಪಿ. ಯು. ಸಿ.ಯನ್ನು ಮೈಸೂರಿನ ಫಿಲೋಮಿನಾ ಕಾಲೇಜಿನಲ್ಲಿ ಓದುತ್ತಿದ್ದಾಗ ಗೋಪಾಲಕೃಷ್ಣ ಅಡಿಗರ ವಿದ್ಯಾರ್ಥಿಯಾಗಿದ್ದರು. ಅಡಿಗರ ಯುವಪ್ರವರ್ತಕ ಕವನ ಸಂಗ್ರಹ ಚಂಡೆ ಮದ್ದಳೆಯನ್ನು ಮೊದಲು ಪ್ರಕಟಿಸಿದವರು ಎಂ.ಬಿ ಮರಕಿಣಿ, ಶಂ. ಪಾ. ದೈತೋಟ ಮೊದಲಾದವರು ಪುತ್ತೂರಿನಲ್ಲಿ ಪ್ರಾರಂಭಿಸಿದ್ದ ಜನಪ್ರಿಯ ಸಾಹಿತ್ಯ ಮಾಲೆ ಎಂಬ ಪ್ರಕಾಶನ ಸಂಸ್ಥೆ. ಅದರ ಹಸ್ತಪ್ರತಿಯನ್ನು ಅಡಿಗರಿಂದ ದೊರಕಿಸಿಕೊಳ್ಳುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು. ಸಂಗಮ ಸಾಹಿತ್ಯ ಮಾಲೆಗಾಗಿ ಯರ್ಮುಂಜರ ಕಥೆಗಳನ್ನು ದೊರಕಿಸಿಕೊಟ್ಟವರು ಸಹಾ ಇವರೇ ಆಗಿದ್ದಾರೆ. ಕಲ್ಮಡ್ಕ ಪಂಚಾಯತ್ ಲೈಬ್ರೆರಿಗೆ ಹಲವು ಒಳ್ಳೆಯ ಪುಸ್ತಕಗಳನ್ನು ಆರಿಸಿ ಹಾಕಿಸಿದರು. ಅದರಲ್ಲಿ 1955ರ ವರೆಗೆ ಪ್ರಕಟವಾದ ಕನ್ನಡದ ಅನೇಕ ಮುಖ್ಯ ಪುಸ್ತಕಗಳಿದ್ದವು. ಮುಂದೆ 1960ರ ದಶಕದಲ್ಲಿ ಈ ಲೈಬ್ರೆರಿಯ ಪ್ರಯೋಜನ ಪಡೆದವರಲ್ಲಿ ನಾನೂ ಒಬ್ಬ. ಇವರ ಅಣ್ಣನ ಮಕ್ಕಳು ಈಗ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬರಾದ ಶಿವಸುಬ್ರಹ್ಮಣ್ಯ ಈಗ ಕನ್ನಡಪ್ರಭ ಪತ್ರಿಕೆಯ ಸಂಪಾದಕರು.
ಇವರ ಒಂದು ಕವನ ಸಂಗ್ರಹ ಬಿದ್ದಗರಿ ಇವರು ಬದುಕಿದ್ದಾಗಲೇ ಪ್ರಕಟವಾಗಿದೆ. ಇದನ್ನು ಪ್ರಕಟಿಸಿದವರು ಪಿ. ಆರ್. ತಿಪ್ಪೇಸ್ವಾಮಿ, ಎಚ್. ಎಂ. ಮರುಳಸಿದ್ದಯ್ಯ ಮೊದಲಾದವರು ಮೈಸೂರಿನಲ್ಲಿ ಪ್ರಾರಂಭಿಸಿದ ಕನ್ನಡಕುಲ ಎಂಬ ಪ್ರಕಾಶನ ಸಂಸ್ಥೆ. 1954ರಲ್ಲಿ ಅಡಿಗರ ಹಿನ್ನುಡಿಯೊಂದಿಗೆ ಇದು ಪ್ರಕಟವಾಗಿದೆ. ಪ್ರತಿಗಳು ಲಭ್ಯವಿಲ್ಲದಿದ್ದ ಈ ಪುಸ್ತಕವನ್ನು ಕೆಲವು ಹೆಚ್ಚು ಲೇಖನಗಳೊಂದಿಗೆ ಪುತ್ತೂರಿನ ಕರ್ನಾಟಕ ಸಂಘದ ಬೋಳಂತಕೋಡಿ ಈಶ್ವರ ಭಟ್ಟರು ಪುನರ್ಮುದ್ರಿಸಿದ್ದರು. ಪುಸ್ತಕದ ಹೆಸರು ಬಿದ್ದದ್ದು ಗರಿಯಲ್ಲ, ಹಕ್ಕಿಯೇ. ರಾಮಚಂದ್ರರ ಅಕಾಲಿಕ ನಿಧನ ಸೂಚಿಸುವುದು ಶೀರ್ಷಿಕೆಯ ಉದ್ದೇಶ. ಗರಿ ಉದುರಿಸುತ್ತಾ ಹಾರುವ ಸ್ಥಿತಿಯಲ್ಲಿರುವ ಹಕ್ಕಿ ಹಾರುತ್ತಾ ಹೋಗುವುದರ ಬದಲು ಕೆಳಗೆ ಬಿದ್ದುಬಿಟ್ಟಿದೆ. ಗರಿಯಷ್ಟೇ ಬಿದ್ದಿದ್ದರೆ ಎತ್ತಿ ಪುಸ್ತಕದ ಮಧ್ಯೆ ಇಟ್ಟುಕೊಳ್ಳಬಹುದಿತ್ತು. ಹಕ್ಕಿಯೇ ಬಿದ್ದದ್ದರಿಂದ ಮುಂದೆ ಗರಿಯೂ ಸಿಕ್ಕದಂತಾಗಿದೆ.
ಅವರ ಸಂಗ್ರಹದಲ್ಲಿ ಒಂದು ತುಂಬಾ ಒಳ್ಳೆಯ ಪದ್ಯವಿದೆ. "ಸುಪ್ತಶಕ್ತಿ" ಎಂಬ ಹೆಸರಿನ ಈ ಪದ್ಯ ಇಪ್ಪತ್ತನೇ ಶತಮಾನದ ಮುಖ್ಯ ಪದ್ಯಗಳಲ್ಲಿ ಒಂದು. ಮನುಷ್ಯನಲ್ಲಿ ಸುಪ್ತವಾದೊಂದು ಶಕ್ತಿಯಿದೆ, ಅದು ತೃಪ್ತ ಪೋಷಣಕ್ಕೆ ಬೆಳೆಯುತ್ತದೆ, ಇಲ್ಲವಾದರೆ ಒಣಗಿ ಹೋಗುತ್ತದೆ ಎಂಬುದು ಕವನದ ಮುಖ್ಯ ಭಾವ. ಸುಪ್ತಶಕ್ತಿಯ ಬೆಳವಣಿಗೆ ವ್ಯಕ್ತಿತ್ವ ವಿಕಸನದ ದೃಷ್ಟಿಯಿಂದ ಮುಖ್ಯ ಎನ್ನುವುದು ಕನ್ನಡದ ಬಹುಶ್ರೇಷ್ಠ ಕವಿತೆಗಳಲ್ಲಿ ಒಂದಾದ ಅಡಿಗರ "ವರ್ಧಮಾನ"ದ ಮುಖ್ಯವಸ್ತುವೂ ಹೌದು. ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಗತ್ಯವಾದ ವ್ಯಕ್ತಿತ್ವ ವಿಕಸನದ ಈ ವಸ್ತು ಕನ್ನಡ ಕಾವ್ಯದಲ್ಲಿ ಯಾವ ಯಾವ ರೀತಿಯಲ್ಲಿ ನಿರ್ವಹಿಸಲ್ಪಟ್ಟಿದೆ ಎಂಬ ಕುರಿತು ಬರೆಯುವುದಿದ್ದರೆ, "ವರ್ಧಮಾನ"ವನ್ನು ಹೇಗೆ ನಿರ್ಲಕ್ಷಿಸುವುದು ಸಾಧ್ಯವಿಲ್ಲವೋ ಹಾಗೆಯೇ "ಸುಪ್ತಶಕ್ತಿ"ಯನ್ನೂ ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಅದು ಎಂಥಾ ಶಕ್ತಿಶಾಲಿಯಾದ ಪದ್ಯ ಎಂಬುದನ್ನು ಈ ಕೆಲವು ಮೊದಲ ಸಾಲುಗಳನ್ನು ಗಮನಿಸುವ ಮೂಲಕ ತಿಳಿಯಬಹುದು:
ನಾನು ನೀನು ಎಲ್ಲ ಎಲ್ಲ
ಒಂದು ಒಂದು ಬೀಜವು;
ಹೊಳ್ಳು ಜಳ್ಳು ಬೀಜವಲ್ಲ
ತುಂಬಿ ತುಡಿವ ಜೀವವು.
ನಮ್ಮ ಕಿರಿಯ ಒಡಲಿನಲ್ಲಿ
ವಿಶ್ವವ್ಯಾಪಿ ಸ್ವಪ್ನವು
ತಿರುಗುತಿಹುದು ಗುಡುಗುತಿಹುದು
ಹೊರಗೆ ಧುಮುಕಿ ಮುತ್ತಲು.
ಚಿಂತೆಯುಸಿರೊ ಹರ್ಷರಸವೊ
ಬೆವರ ಸ್ವಾತಿ ವರ್ಷವೊ
ಎಲ್ಲ ಬೇಕು ಹೊಟ್ಟೆಯಲ್ಲಿ
ಅವಿತ ಕನಸು ಚಿಗುರಲು.
ನೆಲದ ಹುಡಿಯೊಳಿಲ್ಲಿ ಚಿಗಿತು ಬಾನ ಬಿತ್ತರಕ್ಕೆ ಚಿಮ್ಮಿ
ಅಮರ ಲೋಕಕೊಂದು ಕುಡಿಯ ಕಳುಹಿ ಸೊದೆಯ ತರುವೆವು;
ಇಲ್ಲಿ ನೆಲದ ದಾಹ ತಣಿಸಿ ಹುಡಿಯ ಹುಡಿಯ ರತ್ನವೆಣಿಸಿ
ಸೊಗದ ಹಾಯಿದೋಣಿಯೇರಿ ಕ್ಷೀರಯಾನಗೊಳ್ವೆವು.
ಈ ಕವಿ ಪದಗಳನ್ನು ಬಳಸುವ ಕ್ರಮಕ್ಕೆ ಉದಾಹರಣೆಯಾಗಿ ಈ ಸಾಲುಗಳನ್ನು ನೋಡಿ:
ಸಾವನಪ್ಪಿ ಚೆಲ್ಲಿ ಹೋದ ಎಲುಬುಗೂಡ ರಾಸಿಗೆ
ಮಲಯಗಿರಿಯ ಕಳಸದಿಂದ ಅಮೃತಧಾರೆ ಸುರಿವೆವು,
ಸುರಿದು ಕಲ್ಪವೃಕ್ಷದೊಂದು ಬೀಜ ಬಿತ್ತಿ ನೆಗೆವೆವು,
ನೆಗೆದು ರೆಕ್ಕೆ ಬಿಚ್ಚಿ ಧರೆಗೆ ತಂಪು ನೆಳಲು ತರುವೆವು.
ರಾಸಿ ಎಂದರೆ ಜಾನುವಾರೂ ಹೌದು ರಾಶಿಯೂ ಹೌದು. ಕವಿ ಮೇಲಿನ ಸಾಲಿನಲ್ಲಿ ಎರಡೂ ಅರ್ಥ ಬಳಸುತ್ತಾರೆ. ಬಳಸಿ ಶ್ಲೇಷೆಯನ್ನು ಧ್ವನ್ಯರ್ಥಕ್ಕೆ ಎತ್ತುತ್ತಾರೆ. ಇದು ಬೇಂದ್ರೆ ಅಡಿಗರು ತಮ್ಮ ಒಳ್ಳೆಯ ಕವನಗಳಲ್ಲಿ ಪದಗಳನ್ನು ಬಳಸುವ ಕ್ರಮ. ಕವನದಲ್ಲಿ ಈ ಬಗೆಯ ಸಾಲು ಇದೊಂದೇ. ಆದರೆ ಇದು ರಾಮಚಂದ್ರ ತಮ್ಮ ಇಪ್ಪತ್ತರ ಹರೆಯದಲ್ಲಿ ಖಾಯಿಲೆ ಮಲಗಿದ್ದಾಗ ಬರೆದ ಪದ್ಯ ಎಂಬುದನ್ನು ನೆನೆದಾಗ ಅವರು ಎಂಥಾ ಭರವಸೆ ಹುಟ್ಟಿಸುತ್ತಿದ್ದ ಕವಿ ಎಂಬುದು ಸ್ಪಷ್ಟವಾಗುತ್ತದೆ.
ಕಾವ್ಯಪ್ರೇಮಿಗಳ ಮಧ್ಯೆ ಹೆಚ್ಚು ವ್ಯಾಪಕವಾಗಿ ಗೊತ್ತಾಗಬೇಕಾದ ಪದ್ಯ "ಸುಪ್ತಶಕ್ತಿ".
(ಮುಂದಿನ ಸಲ ಟಿ. ಜಿ. ಮುಡೂರರ ಕಾವ್ಯದ ಬಗ್ಗೆ ಬರೆಯುತ್ತೇನೆ)
Thursday, August 26, 2010
Friday, August 20, 2010
ಕಲ್ಮಡ್ಕದಲ್ಲಿ ಹತ್ತು ವರ್ಷ
ನಾನು ಕಲ್ಮಡ್ಕ ಗ್ರಾಮಕ್ಕೆ ವಾಸಕ್ಕೆ ಬಂದು ಹತ್ತು ವರ್ಷಗಳಾದವು. ನಾನು ಹುಟ್ಟಿದ್ದು ಈ ಊರಿನಲ್ಲಿ ಅಲ್ಲವಾದರೂ ಬೆಳೆದದ್ದು ಇಲ್ಲಿ. ಆದರೆ 2000ನೇ ಇಸವಿಯಲ್ಲಿ ಇಲ್ಲಿಗೆ ಬಂದಾಗ ಈ ಊರು ಬಿಟ್ಟು 35 ವರ್ಷಗಳೇ ಆಗಿದ್ದವು. ಅಷ್ಟು ವರ್ಷಗಳನ್ನು ಮೈಸೂರು, ಬೆಂಗಳೂರು, ದೆಹಲಿ ಮೊದಲಾದ ನಗರಗಳಲ್ಲಿ ಕಳೆದಿದ್ದೆ. ನಗರ ಜೀವನ ನಡೆಸುತ್ತಿದ್ದಾಗ ಎರಡು ವರ್ಷ ಯಾವುದಾದರೂ ಹಳ್ಳಿಯಲ್ಲಿ ಕಳೆಯಬೇಕು ಅನ್ನಿಸುತ್ತಿತ್ತು. ಯಾಂತ್ರಿಕವಾದ ಜೀವನ ಮತ್ತು ಯೋಚನಾಕ್ರಮಕ್ಕೆ ಅದೊಂದು ಚಿಕಿತ್ಸೆ ಆಗಬಹುದು, ಒಂದು ವೇಳೆ ಆಗದೆ ಇದ್ದರೆ ಹಳ್ಳಿಯಲ್ಲಿ ವಾಸಿಸಬೇಕೆಂಬ ಆಸೆಯನ್ನಾದರೂ ತೀರಿಸಿಕೊಂಡಂತಾಗುತ್ತದೆ ಎನ್ನಿಸುತ್ತಿತ್ತು. ಹೀಗೆ ಇಲ್ಲಿಗೆ ವಾಸಕ್ಕೆ ಬಂದಾಗ ನನ್ನ ಮನಸ್ಸಿನಲ್ಲಿದ್ದದ್ದು ಎರಡು ವರ್ಷ ಕಾಲ ಇಲ್ಲಿ ವಾಸಿಸಬೇಕು ಎಂದು ಮಾತ್ರ. ಆದರೆ ಬಂದ ಮೇಲೆ ಈ ಊರು, ಇಲ್ಲಿನ ಜನ ಇಷ್ಟವಾಗಿ ಹತ್ತು ವರ್ಷದಿಂದ ವಾಸಿಸುತ್ತಿದ್ದೇನೆ. ಸದ್ಯ ಇಲ್ಲಿಂದ ಹೊರಡುವ ಯೋಚನೆ ಇಲ್ಲ.
ಈ ಹತ್ತು ವರ್ಷಗಳಲ್ಲಿ ಅಡಿಕೆ, ತೆಂಗು, ಕೊಕ್ಕೊ, ಬಾಳೆ, ಗೇರು ಬೀಜ, ಕಾಳು ಮೆಣಸು ಕೃಷಿ ಮಾಡಿದೆ. ಕಾಡು ಪ್ರಾಣಿಗಳ ಜೊತೆ ಸೆಣಸಿದೆ. ಬಾವಿ ತೆಗೆಸಿದೆ. ಮನೆ ಕಟ್ಟಿಸಿದೆ. ಸಾಕಷ್ಟು ಬರೆದೆ. ಅನೇಕ ವರ್ಷಗಳಿಂದ ಬರೆಯಬೇಕೆಂದಿದ್ದುದರ ಬಹುಭಾಗ ಬರೆದೆ. ಅವು ಮತ್ತು ಹಿಂದಿನ ಬರೆವಣಿಗೆ ಒಟ್ಟು ಸೇರಿ ಇಪ್ಪತ್ತು ಸಂಪುಟಗಳಲ್ಲಿ ನನ್ನ ಬರೆವಣಿಗೆಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರಕಟವಾಗಲಿವೆ. ಅದರ ಮೊದಲ ಕಂತಾಗಿ ನನ್ನ ಸಮಗ್ರ ನಾಟಕಗಳ ಸಂಪುಟ 2, 3, 4 ಮತ್ತು ಒಂದು ಕವನ ಸಂಗ್ರಹ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾಗಲಿವೆ. ಸಮಗ್ರ ನಾಟಕಗಳ ನಾಲ್ಕು ಸಂಪುಟಗಳಿಂದ ಒಟ್ಟಿಗೆ ಹನ್ನೊಂದು ನಾಟಕಗಳಿವೆ. ಇವುಗಳಲ್ಲಿ ಹೆಚ್ಚಿನವು ಅಪ್ರಕಟಿತ ನಾಟಕಗಳು. ಕವನ ಸಂಗ್ರಹದಲ್ಲಿ 2003ರಲ್ಲಿ ಪ್ರಕಟವಾದ ನನ್ನ ಸಮಗ್ರ ಕಾವ್ಯ ಮಾತಾಡುವ ಮರದ ನಂತರ ಬರೆದ ಕವನಗಳಿವೆ.
ಈ ಬ್ಲಾಗಿನಲ್ಲಿ ಕೃಷಿಕನಾಗಿ, ಅಧ್ಯಾಪಕನಾಗಿ, ಪತ್ರಕರ್ತನಾಗಿ, ಲೇಖಕನಾಗಿ ನನ್ನ ಅನುಭವ, ವಿಚಾರಗಳನ್ನು ನಾನು ನಿಮ್ಮೆದುರು ಸಾದರ ಪಡಿಸಲಿದ್ದೇನೆ. ಬಹುಶ: ವಾರಕ್ಕೊಮ್ಮೆ. ಸೋ__ಮುಂದಿನ ಭೇಟಿಯ ವರೆಗೆ__ನಮಸ್ಕಾರ.
ಈ ಹತ್ತು ವರ್ಷಗಳಲ್ಲಿ ಅಡಿಕೆ, ತೆಂಗು, ಕೊಕ್ಕೊ, ಬಾಳೆ, ಗೇರು ಬೀಜ, ಕಾಳು ಮೆಣಸು ಕೃಷಿ ಮಾಡಿದೆ. ಕಾಡು ಪ್ರಾಣಿಗಳ ಜೊತೆ ಸೆಣಸಿದೆ. ಬಾವಿ ತೆಗೆಸಿದೆ. ಮನೆ ಕಟ್ಟಿಸಿದೆ. ಸಾಕಷ್ಟು ಬರೆದೆ. ಅನೇಕ ವರ್ಷಗಳಿಂದ ಬರೆಯಬೇಕೆಂದಿದ್ದುದರ ಬಹುಭಾಗ ಬರೆದೆ. ಅವು ಮತ್ತು ಹಿಂದಿನ ಬರೆವಣಿಗೆ ಒಟ್ಟು ಸೇರಿ ಇಪ್ಪತ್ತು ಸಂಪುಟಗಳಲ್ಲಿ ನನ್ನ ಬರೆವಣಿಗೆಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರಕಟವಾಗಲಿವೆ. ಅದರ ಮೊದಲ ಕಂತಾಗಿ ನನ್ನ ಸಮಗ್ರ ನಾಟಕಗಳ ಸಂಪುಟ 2, 3, 4 ಮತ್ತು ಒಂದು ಕವನ ಸಂಗ್ರಹ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾಗಲಿವೆ. ಸಮಗ್ರ ನಾಟಕಗಳ ನಾಲ್ಕು ಸಂಪುಟಗಳಿಂದ ಒಟ್ಟಿಗೆ ಹನ್ನೊಂದು ನಾಟಕಗಳಿವೆ. ಇವುಗಳಲ್ಲಿ ಹೆಚ್ಚಿನವು ಅಪ್ರಕಟಿತ ನಾಟಕಗಳು. ಕವನ ಸಂಗ್ರಹದಲ್ಲಿ 2003ರಲ್ಲಿ ಪ್ರಕಟವಾದ ನನ್ನ ಸಮಗ್ರ ಕಾವ್ಯ ಮಾತಾಡುವ ಮರದ ನಂತರ ಬರೆದ ಕವನಗಳಿವೆ.
ಈ ಬ್ಲಾಗಿನಲ್ಲಿ ಕೃಷಿಕನಾಗಿ, ಅಧ್ಯಾಪಕನಾಗಿ, ಪತ್ರಕರ್ತನಾಗಿ, ಲೇಖಕನಾಗಿ ನನ್ನ ಅನುಭವ, ವಿಚಾರಗಳನ್ನು ನಾನು ನಿಮ್ಮೆದುರು ಸಾದರ ಪಡಿಸಲಿದ್ದೇನೆ. ಬಹುಶ: ವಾರಕ್ಕೊಮ್ಮೆ. ಸೋ__ಮುಂದಿನ ಭೇಟಿಯ ವರೆಗೆ__ನಮಸ್ಕಾರ.
Subscribe to:
Posts (Atom)