Monday, August 22, 2011

ಹಳ್ಳಿಗಳಲ್ಲಿ ಲಂಚ

ಇತ್ತೀಚಿನ ಎರಡು ವಿದ್ಯಮಾನಗಳು ನನಗೆ ತುಂಬಾ ಖುಷಿ ಕೊಟ್ಟಿವೆ. ಈ ದೇಶದ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸಿವೆ. ಮೊದಲನೆಯದ್ದು ಅಣ್ಣಾ ಹಜಾರೆಯವರ ಪ್ರತಿಭಟನೆಯ ಹಕ್ಕನ್ನು ದಮನಿಸಲು ಸರಕಾರಕ್ಕೆ ಸಾಧ್ಯವಾಗದೆ ಇದ್ದದ್ದು. ಜನ ಸ್ವಯಂಸ್ಫೂತಿಯಿಂದ ಪ್ರತಿಭಟಿಸಿದ ಕ್ರಮವೇ ಈ ದೇಶದಲ್ಲಿ ಪ್ರಜಾಪ್ರಭುತ್ವ ಬೇರೂರುತ್ತಿದೆ, ಜನರಿಗೆ ಅದರ ಮಹತ್ವ ಗೊತ್ತಾಗಿದೆ ಎನ್ನುವುದಕ್ಕೆ ಸಾಕ್ಷಿ. ಎರಡನೆಯದ್ದು  ಯಡಿಯೂರಪ್ಪನವರು ಅಧಿಕಾರದಿಂದ ಕೆಳಗಿಳಿದದ್ದು. ಮಾತ್ರವಲ್ಲ, ಅವರಿಗೆ ರಾಜ್ಯ ಪ್ರವಾಸಕ್ಕೆ ಅವರ ಪಕ್ಷದ ವರಿಷ್ಠರು ಅನುಮತಿ ನಿರಾಕರಿಸಿದ್ದಾರೆ. ಅತಿ ಭ್ರಷ್ಠರ ಜೊತೆಗಿನ ಸಂಬಂಧಕ್ಕೆ ಅವರಿಗಿಂತ ಕಮ್ಮಿ ಭ್ರಷ್ಠರು  ತಯಾರಿಲ್ಲ. ಭ್ರಷ್ಠತೆಯೇ ಸಂಬಂಧದ ಅಡಿಪಾಯವಾಗಿರುವ ರಾಜಕಾರಣದಲ್ಲಿ ಇದನ್ನು ಶುಭ ಸೂಚನೆಯೆಂದೇ ಪರಿಗಣಿಸಬೇಕಾಗುತ್ತದೆ.

ರಾಜಕಾರಣಿಗಳ, ದೊಡ್ಡ ಅಧಿಕಾರಿಗಳ  ಭ್ರಷ್ಠತೆಯಷ್ಟೇ ಮುಖ್ಯವಾದದ್ದು ಹಳ್ಳಿಗಳ, ಸಣ್ಣ ಪುಟ್ಟ ಊರುಗಳ ಅಧಿಕಾರಿಗಳ ಲಂಚಗುಳಿತನ. ನಮ್ಮ ಎಲ್ಲಾ ವಿಲೇಜ್ ಅಕೌಂಟೆಂಟುಗಳ, ಪಂಚಾಯತ್ ಅಧಿಕಾರಿಗಳ ಆಸ್ತಿಪಾಸ್ತಿ ಆದಾಯಗಳ ತನಿಖೆ ತುಂಬಾ ಅಗತ್ಯ. ಇವರ ಲಂಚಗುಳಿತನ, ಅಧಿಕಾರ ಮದ ತಡೆಯಲು ಮತ್ತು ತಗ್ಗಿಸಲು ಪ್ರತಿ ಊರಿನಲ್ಲಿ ಒಂದು ವಿಜಿಲೆನ್ಸ್ ಕಮಿಟಿ ಇರಬೇಕು. 1980 ದಶಕದ ರೈತ ಹೋರಾಟದ ಸಮಯದಲ್ಲಿ ಶಿವಮೊಗ್ಗ ಸಮೀಪದ ಗಾಜನೂರಿನಲ್ಲಿ ರೈತರೇ ಸೇರಿ ಇಂಥಾ ಒಂದು ವಿಜಿಲೆನ್ಸ್ ಕಮಿಟಿ ಕಟ್ಟಿದ್ದರು. ಮನಸ್ಸಿಗೆ ಬಂದ ಹಾಗೆ ದರ್ಬಾರು ಮಾಡುವುದು ಅಧಿಕಾರಿಗಳಿಗೆ ಆಗ ಅಸಾಧ್ಯವಾಗಿತ್ತು. "ಅಧಿಕಾರಿಗಳು ರೈತರನ್ನು ಭೇಟಿಯಾಗುವ ಸಮಯ: ಸಾಯಂಕಾಲ 7ರಿಂದ 8 ಗಂಟೆ" ಎಂಬ ಒಂದು ಬೋರ್ಡು ಆಗ ಆ ಊರಿನಲ್ಲಿ ಇತ್ತು. ನನಗೆ ಅದು ಸರಿ ಅನ್ನಿಸುತ್ತದೆ. ಅಧಿಕಾರಿಗಳನ್ನು ನಾವು ಭೇಟಿಯಾಗಬಹುದಾದ ಸಮಯವನ್ನು ಅವರು ನಿಗದಿಪಡಿಸಬಹುದಾದರೆ ನಮ್ಮನ್ನು ಅವರು ಭೇಟಿಯಾಗಬೇಕಾದ ಸಮಯವನ್ನು ನಾವು ರೈತರು ಯಾಕೆ ನಿಗದಿ ಪಡಿಸಬಾರದು? ಎಷ್ಟೆಂದರೂ ಅವರಿಗೆ ಸಂಬಳ ಬರುವುದು ನಾವು ಕೊಡುವ ತೆರಿಗೆಯ ದುಡ್ಡಿನಿಂದ. ಹೀಗಾಗಿ ಅವರು ನಮ್ಮ ಕೈಕೆಳಗಿನವರು. ಅವರಲ್ಲಿ ಹೆಚ್ಚಿನವರು ಲಂಚ ತಿನ್ನುವುದರಿಂದ ನೈತಿಕವಾಗಿಯೂ  ನಮಗಿಂತ ಕೆಳಗಿನವರು.

ಗಾಜನೂರಿನಲ್ಲಿ ಆಗ ಭಾನುವಾರ ಒಂದು ಸರಕಾರಿ ಜೀಪು ಜನರನ್ನು ತುಂಬಿಕೊಂಡು ಹೋಗುತ್ತಿತ್ತಂತೆ. ವಿಚಾರಿಸಿದಾಗ ಅಧಿಕಾರಿಯೊಬ್ಬರ ಸಂಬಂಧಿಕರ ಮದುವೆಗೆ ಹೋಗುತ್ತಿತ್ತೆಂದು ತಿಳಿಯಿತು. ರೈತರು ಆ ಖಾಸಗಿ ಪಾರ್ಟಿಯನ್ನು ಸರಕಾರಿ ಜೀಪಿನಿಂದ ಇಳಿಸಿ ಬಸ್ಸಿನಲ್ಲಿ ಹೋಗುವಂತೆ ಮಾಡಿದರಂತೆ. ಪ್ರತಿ ಹಳ್ಳಿಯಲ್ಲಿ ಇಂದು ಇಂಥಾ ಎಚ್ಚರ ಮೂಡಬೇಕಾದ ಅಗತ್ಯವಿದೆ.

ನಾನು ಕಲ್ಮಡ್ಕಕ್ಕೆ ಬಂದ ಸುರುವಿಗೆ 2000-2001ರ ಸುಮಾರಿಗೆ ಒಂದು ಸಭೆ ನಡೆದಿತ್ತು. ಯಾವುದರ ಕುರಿತ ಸಭೆಯೆಂದು ಮರೆತುಹೋಗಿದೆ. ಅದರ ಅಧ್ಯಕ್ಷತೆಯನ್ನು ನಾನೇ ವಹಿಸಿದ್ದೆ. ಹೀಗಾಗಿ ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೋ ಸಭೆ ಇರಬೇಕು. ಅದಕ್ಕೆ ಇಲ್ಲಿನ ಆಗಿನ  ವಿಲೇಜ್ ಅಕೌಂಟೆಂಟ್ ಬಂದಿದ್ದ. ಅವನು ಕೂತ ಗತ್ತು ನೋಡಬೇಕಿತ್ತು. ಕಾಲು ಚಾಚಿ. ಕುರ್ಚಿಯಲ್ಲಿ ಮಲಗಿದಂತೆ ನೀಳವಾಗಿ ಮೈ ಚಾಚಿ ಒರಗಿ. ತೊಡೆಗಳನ್ನು ಅಗಲಿಸಿ ಕೂತಿದ್ದ. ಆ ಸಭೆಯಲ್ಲಿ ಬೇರೆ ಯಾರೂ ಹಾಗೆ ಕೂತಿರಲಿಲ್ಲ. ಹಾಗೆ ಅವ ಕೂತ ಕ್ರಮ ನೋಡಿ ಬರುತ್ತಿದ್ದ ಸಿಟ್ಟನ್ನು ನುಂಗಿಕೊಂಡು ಸಭೆ ನಡೆಸಿದೆ. ಈಗ ಅನ್ನಿಸುತ್ತಿದೆ: ಒಂದೋ ಸರಿಯಾಗಿ ಎಲ್ಲರೂ ಕೂತ ಹಾಗೆ ಕೂತುಕೊಳ್ಳಿ, ಆಗುವುದಿಲ್ಲ ಎಂದಾದರೆ get out ಎಂದು ಹೇಳಬೇಕಿತ್ತು ಎಂದು. ಹಾಗೆ ಅವತ್ತು ಹೇಳಲಿಲ್ಲ, ನನ್ನ ಸಿಟ್ಟನ್ನು ತೋರಿಸಿಕೊಳ್ಳಲಿಲ್ಲ ಎಂದು ನನ್ನ ಬಗ್ಗೆ ನನಗೆ ಅಸಮಾಧಾನವಿದೆ.




Sunday, August 7, 2011

ಬರೆಯದ ದಿನಗಳು

ಬ್ಲಾಗು ಬರೆಯದೆ ಅನೇಕ ದಿನಗಳಾದವು.  ನನ್ನ ಸ್ಕಾನರ್ ಕೆಟ್ಟು, ಅದು ರಿಪೇರಿಯಾಗಲಿ, ಆದ ಮೇಲೆ ವಿಜಯ ಕರ್ನಾಟಕದಲ್ಲಿ ಭೈರಪ್ಪನವರ ಕಾದಂಬರಿ ಬಗ್ಗೆ ಬರೆದದ್ದನ್ನು ಹಾಕಿ ಆ ಮೇಲೆ ಬೇರೆ ಬರೆಯೋಣ ಎಂದುಕೊಂಡು ದಿನ ಕಳೆದೆ. ಸ್ಕಾನರ್ ಇನ್ನೂ ರಿಪೇರ ಆಗಿ ಬಂದಿಲ್ಲ. ಹಳ್ಳಿ ಜೀವನದ ಕೆಲವು ತೊಡಕುಗಳಲ್ಲಿ ಇದು ಒಂದು. ಪೇಟೆಯಲ್ಲಿ ಒಂದು ದಿನದಲ್ಲಿ ಆಗುವ ಕೆಲಸಕ್ಕೆ ಇಲ್ಲಿ ಅನೇಕ ದಿನ ಹಿಡಿಯುತ್ತದೆ. ಕೆಲವು ಸಲ ಬಿಡಿ ಭಾಗಗಳನ್ನು ಬೆಂಗಳೂರಿನಿಂದ ತರಿಸಿ ಹಾಕಬೇಕಾಗುತ್ತದೆ. ಅಲ್ಲಿ ಕಮ್ಮಿಗೆ ಸಿಗುವುದರಿಂದ ಹಾಗೆ ಮಾಡಲು ಇಲ್ಲಿನವರು ಇಷ್ಟ ಪಡುತ್ತಾರೆ. ಆದರೆ ಒಂದು ಕೆಲಸ ಮಾಡಲು ಇನ್ನೊಂದು ಕೆಲಸ ಮುಗಿಯುವ ವರೆಗೆ ಕಾಯುವುದರಿಂದ ಸಮಯ ವ್ಯರ್ಥವಾಗುವುದು ನಿಜ.

ಪರ್ವದ ನಂತರ--ಆವರಣ ಬಿಟ್ಟು--ಕವಲು ವರೆಗಿನ ಭೈರಪ್ಪನವರ ಕಾದಂಬರಿಗಳು ಶ್ರೆಷ್ಠ ಎಂದು ವಿಜಯ ಕರ್ನಾಟಕದಂಥಾ ಬಹು ಜನ ಓದುವ ಪತ್ರಿಕೆಯಲ್ಲಿ ಬರೆದೆನೆಂದು ನನಗೆ ಸಂತೋಷವಾಗಿವೆ. ಅನುಭವದ ವ್ಯಾಪ್ತಿಯಲ್ಲಿ , ಪಾತ್ರಚಿತ್ರಣದ ವೈವಿಧ್ಯತೆಯಲ್ಲಿ ಅವರು ಅವರ ಸಮಕಾಲೀನರಲ್ಲೇ ಶ್ರೇಷ್ಠರು. ಅವರು ಅನಂತಮೂರ್ತಿಗಿಂತ ಹೆಚ್ಚು ಶ್ರೇಷ್ಠ ಕಾದಂಬರಿಕಾರರು. ಅನಂತಮೂರ್ತಿ ವಿಮರ್ಶೆ, ಭಾಷಣ, ಸಾಹಿತ್ಯ ಪ್ರಸಾರ ಮೊದಲಾದವುಗಳ ಮೂಲಕ ನಮ್ಮ ಮುಖ್ಯ ಸಾಹಿತ್ಯಪುರುಷ. ಆದರೆ ಕಾದಂಬರಿಕಾರರಾಗಿ ಅವರ ಸಾಧನೆ ಭೈರಪ್ಪ ಸಾಧಿಸಿದದಕ್ಕಿಂತ ಕಮ್ಮಿ ಮಟ್ಟದ್ದು. ಇದನ್ನು ಗುರುತಿಸಲು ಸಾಧ್ಯವಾಗದೆ ಇರುವುದನ್ನು ನೋಡಿದಾಗ ಕೆಲವು ಸಲ ಅವರ ವಿಮರ್ಶನಶಕ್ತಿಯ ಬಗ್ಗೆ  ಅನುಮಾನವಾಗುತ್ತದೆ. ಗೊತ್ತಾಗಿಯೂ ಬೇಕಂತಲೇ ಭೈರಪ್ಪನವರನ್ನು ರಾಹುಗ್ರಸ್ತರೆಂದು ಕರೆಯುವುದು--ತಮ್ಮ ಥಿಯರಿಗಳಿಂದ ಗ್ರಸ್ತರಾಗಿ ಜೀವನಾನುಭವದಿಂದ ದೂರವಾದವರು ಎಂಬ ಅರ್ಥದಲ್ಲಿ--ಎಂದಾಗಿದ್ದರೆ ಅವರ ಪ್ರಾಮಾಣಿಕತೆ ಶಂಕಿಸಬೇಕಾಗುತ್ತದೆ.  ಸಾಕ್ಷಿ, ತಂತು ಮಟ್ಟದ ಅಪಾರ ಜೀವನಾನುಭವದ ಜೀವಂತಿಕೆಯಿಂದ ತುಂಬಿ ತುಳುಕುವ ಕಲಾಕೃತಿಗಳನ್ನು ಅವರ ಸಮಕಾಲೀನರು ಯಾರೂ ಸೃಷ್ಟಿಸಿಲ್ಲ.

Sunday, July 3, 2011

ದೇವಾಂಗಣ

ಈ ಸಲದ ವಿಜಯ ಕರ್ನಾಟಕದ ನನ್ನ ಅಂಕಣದಲ್ಲಿ ಭೈರಪ್ಪನವರು ಪರ್ವ ಮತ್ತು ಆನಂತರ ಬರೆದ ಕಾದಂಬರಿಗಳು ಯಾಕೆ ಶ್ರೇಷ್ಠ ಎಂದು ವಿವರಿಸಿದ್ದೇನೆ. ನನ್ನ scanning machine ಕೈ ಕೊಟ್ಟಿರುವುದರಿಂದ ಅದನ್ನು ನನ್ನ ಬ್ಲಾಗಿನಲ್ಲಿ ಹಾಕಲು ಆಗುತ್ತಿಲ್ಲ. ವಿಜಯ ಕರ್ನಾಟಕ ಸಿಕ್ಕಿದವರು ಓದಿ ತಿಳಿಸಿ. ಇಲ್ಲವಾದರೆ scanning machine ಸರಿಯಾದ ಕೂಡಲೇ ಇಲ್ಲಿ ಪೋಸ್ಟ್ ಮಾಡುತ್ತೇನೆ.

Monday, June 20, 2011

ಯರ್ಮುಂಜ ರಾಮಚಂದ್ರ: ಇನ್ನೊಂದು ಫೊಟೋ

ಯರ್ಮುಂಜರ  ಇನ್ನೊಂದು ಫೊಟೊ ಇದೆಯೆಂದು ಮಿತ್ರ ಜನಾರ್ದನ ಭಟ್ ಮೇಲ್ ಕಳಿಸಿದ್ದರು. ಇದು ಅವರೇ ಸಂಪಾದಿಸಿದ ದಕ್ಷಿಣ ಕನ್ನಡದ ಶತಮಾನದ ಕಾವ್ಯ, 1900-2000ದಲ್ಲಿ ಅಚ್ಚಾಗಿದೆ. ಮೇಲೆ ಕಾಣಿಸುವುದೇ ಈ ಫೊಟೋ. ಅವರ ಆ ಪುಸ್ತಕದಿಂದಲೇ ತೆಗೆದುಕೊಂಡಿದ್ದೇನೆ. ಹಿಂದಿನ ಫೊಟೋದ ನಂತರದ ಫೊಟೋ ಇರಬಹುದು. ಮುಖ ಹೆಚ್ಚು ಪ್ರಬುದ್ಧವಾಗಿದೆ.

Saturday, June 18, 2011

ದೇವಾಂಗಣ: ಧರ್ಮಸಂಸ್ಕೃತಿ-ಕಾವ್ಯಸಂಸ್ಕೃತಿ

ಇದು ಜೂನ್ 19, 2011ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಅಂಕಣ. ಮೇಲಿನದ್ದು ಮುಳಿಯರ ಫೊಟೊ.

Wednesday, June 15, 2011

ಕಿವಿಗೆ ಟಿಕ್ಕಿ

ಸಾಂಪ್ರದಾಯಿಕ ವೇಷಭೂಷಣದ ಪ್ರಕಾರ ಕಿವಿಗೆ ಟಿಕ್ಕಿ ಇರುತ್ತಿತ್ತು. ಯರ್ಮುಂಜ ರಾಮಚಂದ್ರರಿಗೂ ಇದ್ದಿರಬೇಕು. ಫೊಟೋದಲ್ಲಿ ಗೊತ್ತಾಗುವುದಿಲ್ಲ. ಸಾದು ಬೊಟ್ಟೇ ಇತ್ತು ಎಂದ ಮೇಲೆ ಟಿಕ್ಕಿ ಇದ್ದಿರಲೇಬೇಕು. ಯಾಕೆಂದರೆ ಅಪ್ಪ ಇರುವ ಯಾರೇ ಆದರೂ ಟಿಕ್ಕಿ ತೆಗೆದಿಡುವುದು ಹವ್ಯಕರಲ್ಲಿ ಅಶುಭ. ಅಪ್ಪ ಸತ್ತಾಗ  ಈ ಟಿಕ್ಕಿ ತೆಗೆಯುತ್ತಾರೆ. ವರ್ಷಾಂತಿಕ ಕಳೆದ ಮೇಲೆ ಮತ್ತೆ ಹಾಕಿಕೊಳ್ಳುತ್ತಾರೆ. ಈಗಲೂ ಕಲ್ಮಡ್ಕ ಮತ್ತು ಸುತ್ತಮುತ್ತ ಊರುಗಳಲ್ಲಿ ಟಿಕ್ಕಿ ಹಾಕಿಕೊಂಡಿರುವವರು ಇದ್ದಾರೆ. ನನಗೂ ಎಸ್ಸೆಸ್ಸೆಲ್ಸಿ ಮುಗಿಯುವ ವರೆಗೆ ಈ ಟಿಕ್ಕಿ ಇತ್ತು. ಆ ಮೇಲೆ ಕಾಲೇಜಿಗೆ ಹೋಗುವವರು ಯಾರೂ ಟಿಕ್ಕಿ ಹಾಕಿಕೊಳ್ಳುವುದಿಲ್ಲ, ಕ್ಲಾಸಿನಲ್ಲಿ ತಮಾಷೆ ಮಾಡಿಯಾರು ಅನ್ನಿಸಿ ತೆಗೆದಿಟ್ಟೆ. ಅಮ್ಮ "ಹಾಂಗೆಲ್ಲಾ ಟಿಕ್ಕಿ ತೆಗೆದಿರ್ಸುಲೆ ಆಗ" ಎಂದರು. ಈಗಲೂ ಕಿವಿಯಲ್ಲಿ ತೂತು ಇದೆ.

ಟಿಕ್ಕಿಯೆಂದರೆ ಚಿಕ್ಕ ಬೆಂಡೋಲೆ. ಇದನ್ನು ಹಾಕಿಕೊಳ್ಳುವ ಕ್ರಮ ಹವ್ಯಕರಲ್ಲಿ ಮಾತ್ರವಲ್ಲದೆ ಇತರ ಅನೇಕ ಜನಾಂಗಗಳಲ್ಲಿ ಇದೆ.

ಯರ್ಮುಂಜ ಕುಟುಂಬ ತಮ್ಮ ಪಂಚಾಂಗಕ್ಕಾಗಿ ಪ್ರಸಿದ್ಧವಾಗಿದೆ. ಇವರು ಪ್ರಕಟಿಸುವ ಪಂಚಾಂಗದ ಹೆಸರು ವೈಜಯಂತೀ ಪಂಚಾಂಗ. ಇದು ಈಗ ತನ್ನ ತೊಂಬತ್ತೈದನೇ ವರ್ಷದಲ್ಲಿದೆ. ಹವ್ಯಕರಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಪಂಚಾಂಗ ಇದು.
ಇದನ್ನು ಪ್ರಾರಂಬಿಸಿದವರು ಯರ್ಮುಂಜ ಶಂಕರ ಜೋಯಿಸರು. ಪಂಚಾಂಗದ ಸಂಚಿಕೆಗಳಲ್ಲಿ ಇವರನ್ನು "ಕರ್ನಾಟಕದಲ್ಲಿ ದೃಕ್ಸಿದ್ಧಾಂತದ ಆದ್ಯ ಪ್ರವರ್ತಕರು" ಎಂದು ಬಣ್ಣಿಸಲಾಗಿದೆ. ಇದರ ಈಗಿನ ಸಂಪಾದಕರು "ಯರ್ಮುಂಜ ಭೀಮ ಜೋಯಿಸರ ಮಗ ಶಂಕರ ಜೋಯಿಸ". ಇದರ ಒಂದು ಸಂಚಿಕೆಯಲ್ಲಿ ಕಲಿಪುರುಷ ಬರುವ ಕುರಿತು ಒಂದು ವಿವರಣೆಯಿತ್ತು. ಕೆಂಪು ಕುದುರೆ ಏರಿ ತಲೆ ಓಡಿನಲ್ಲಿ ನೆತ್ತರು ಕುಡಿಯುತ್ತಾ ದಕ್ಷಿಣ ದಿಕ್ಕಿಗೆ ಪ್ರಯಾಣಿಸುತ್ತಾನೆ ಎಂದೆಲ್ಲಾ ಇತ್ತು ಎಂದು ನೆನಪು. ನಾನು ಈ ವಿವರವನ್ನು ನನ್ನ ನಾಟಕ ಕುದುರೆ ಬಂತು ಕುದುರೆಯಲ್ಲಿ ಬಳಸಿಕೊಂಡಿದ್ದೆ.

ಪ್ರಿಸಂ ಬುಕ್ಸ್ ನವರು ಪ್ರಕಟಿಸಿದ ಯರ್ಮುಂಜರ ಸಮಗ್ರ ಕತೆ ಕವನಗಳ ಬಿಡುಗಡೆ 2002ರಲ್ಲಿ ಪುತ್ತೂರಿನಲ್ಲಿ ಆದಾಗ ರಾಮಚಂದ್ರರ ಅಣ್ಣ ಬಂದಿದ್ದರು. ವೇದಿಕೆಯಲ್ಲಿ ಕೂತಿದ್ದು ಭಾಷಣವನ್ನೂ ಮಾಡಿದರು. ರಾಮಚಂದ್ರ ಎಲ್ಲಿಯಾದರೂ ಪತ್ರಿಕೆಗೆ ಸೇರಬೇಕೆಂದು ಇದ್ದರೆಂದೂ ಅದಕ್ಕಾಗಿ ಉತ್ತರ ಕರ್ನಾಟಕದ ಒಂದು ಊರಿಗೆ--ಬೆಳಗಾವಿಗೆ ಎಂದು ನೆನಪು--ಸಂದರ್ಶನಕ್ಕೆ ಹೋಗಿದ್ದರೆಂದೂ  ಕೊನೆಗೆ ಕಡೆಂಗೋಡ್ಲು ಶಂಕರ ಭಟ್ಟರ ರಾಷ್ಟ್ರಬಂಧುವಿನಲ್ಲಿ ಕೆಲಸ ಸಿಕ್ಕಿತೆಂದೂ ಹೇಳಿದರು. ಅದಾದ ಎರಡು ಮೂರು ವರ್ಷಗಳಲ್ಲಿ ಈ ಅಣ್ಣ ತೀರಿಕೊಂಡರೆಂದು ಸುದ್ದಿ ಬಂತು. ಪುತ್ತೂರಿನ ಆ ಸಭೆಯಲ್ಲಿ ನಾನು ಅವರನ್ನು ಕೇಶುವಲ್ ಆಗಿ ಮಾತಾಡಿಸಿದ್ದೆ, ಅಷ್ಟೆ. ಸರಿಯಾಗಿ ಮಾತಾಡಿಸಿ ಗೌರವ ಅರ್ಪಿಸಬೇಕಾಗಿತ್ತೆಂದು ಈಗ ಅನ್ನಿಸುತ್ತಿದೆ.

ಯರ್ಮುಂಜ ರಾಮಚಂದ್ರರ  ಪ್ರಖ್ಯಾತ ಕವನ "ಯಾರಿಲ್ಲಿಗೆ ಬಂದರು ಕಳೆದಿರುಳು?"ನ್ನು ಇಲ್ಲಿ ಕೊಡುತ್ತಿದ್ದೇನೆ. ಅವರು ಎಷ್ಟು ಒಳ್ಳೆಯ ಲೇಖಕ ಎಂಬುದಕ್ಕೆ ಇದೊಂದು ಉದಾಹರಣೆ ಸಾಕು.

ಯಾರಿಲ್ಲಿಗೆ ಬಂದರು ಕಳೆದಿರುಳು

ಯಾರಿಲ್ಲಿಗೆ ಬಂದರು ಕಳೆದಿರುಳು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

ನೆನೆದು ನೆನೆದು ತನು ಪುಳಕಗೊಳ್ಳುತಿದೆ
ನುಡಿವೆನೆ ದನಿ ನಡುಗುತಿದೆ;
ಸ್ಮೃತಿ ವಿಸ್ಮೃತಿಗಳ ಕಂಬನಿ ಮಾಲೆ
ಎಲ್ಲೆಲ್ಲೂ ತೂಗುತಿದೆ;
ಕಳೆದಿರುಳಿನ ಬೆಳದಿಂಗಳಿನ ಮರೆಯಲಿ
ಏನೂ ಅರಿಯದ ಮುಗ್ಧೆಯ ಕಿವಿಯಲಿ
ಯಾರೇನನು ಪಿಸು ನುಡಿದರು ಹೇಳು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

ನಸುಕಿನ ಬೆಳಕಿನೊಳೆಂಥ ಬಳಲಿಕೆ
ಮೂಡಲ ಹಣೆ ಕಡುಗೆಂಪು!
ಮರಮರದೆಡೆಯಲಿ ಕೂಕೂ ಆಟ
ಭೂಮಿಗೆ ಮೈಮರೆವು.
ಅಲ್ಲಿ ಇಲ್ಲಿ ಗಿಡ ಬಳ್ಳಿ ಮರಗಳು
ಯಾವ ನೆನಪಿನಲೊ ಮೈಮರೆತಿಹವು
ಹೃದಯದೊಳೇನನು ಎರೆದರು ಕೊರೆದರು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

ಮೈಯ್ಯೆಲ್ಲಾ ಗದಗುಟ್ಟುತಲಿದೆಯೇ
ಬೆದರಿಸಿದವರಾರು?
ಮುಖ ತೊಯ್ದಿದೆ, ಕಣ್ಣೀರಿನ ಹನಿಯನು
ಹರಿಯಿಸಿದವರಾರು?
ಯಾರೂ ಕಾಣದ ಆ ಮರೆಯೊಳಗೆ
ಕುಲುಕುಲು ಎನುತಿದೆ ಮೆಲುನಗೆಯ ನೊರೆ
ನಿನ್ನೆಯ ಹಾಡಿನ ದನಿಯಿನ್ನೂ ಗುಣು
ಗುಣಿಸುವ ಮಾಯೆಯಿದೆಂಥದು ಹೇಳು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

(14.3.1954)

**********************