Monday, June 18, 2012

ಕುದುರೆ ಬಂತು ಕುದುರೆ ಫೊಟೋಗಳು

ಇವು ಎರಡು ವರ್ಷಗಳ ಕೆಳಗೆ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನ ಕಾರ್ಮಿಕರ ನಾಟಕ ತಂಡ ಸ್ನೇಹರಂಗ ಆಡಿದ ನನ್ನ ನಾಟಕ ಕುದುರೆ ಬಂತು ಕುದುರೆಯ ದೃಶ್ಯಗಳು. ನಾಟಕ ನಿರ್ದೇಶಿಸಿದವರು ಎನ್. ಮಂಗಳಾ. ಫೊಟೋ ತೆಗೆದವರು ಟಿ. ಆರ್. ಚಂದ್ರಶೇಖರ ಶೆಟ್ಟಿ.

ನನಗೆ ಇದು ಇಷ್ಟವಾದ ಪ್ರಯೋಗ. ಆ ನಾಟಕದಲ್ಲಿ ಮೂರು ನಾಟಕಗಳಿವೆ. ಪ್ರೇಕ್ಷಕರ ಎದುರು ರಂಗದ ಮೇಲೆ ನಡೆಯುವ ನಾಟಕ ಒಂದು; ರಂಗದ ಹೊರಗೆ ಗುಡ್ಡದ ಮೇಲೆ ನಡೆಯುತ್ತಿರುವ ಶೂಟಿಂಗ್ ನಾಟಕ ಇನ್ನೊಂದು; ಪಾತ್ರಗಳ ಜೀವನದಲ್ಲಿ ಹಿಂದೆ ಆಗಿಹೋದ ಮತ್ತು ಮುಂದೆ ಆಗಬಹುದಾದ ನಾಟಕ ಮತ್ತೊಂದು. ಮಂಗಳಾರ ಪ್ರಯೋಗ ಆ ಮೂರು ನಾಟಕಗಳನ್ನು ಏಕತ್ರದಲ್ಲಿ ಸಂಧಿಸಿ ತೋರಿಸಿತ್ತು. ನನಗೆ ಆ ನಾಟಕ ನೋಡಿದ ಮೇಲೆ ಇಂಥಾ ಪ್ರತಿಭಾವಂತ ನಿರ್ದೇಶಕರು ನನ್ನ ನಾಟಕ ತೆಗೆದುಕೊಳ್ಳುತ್ತಾರೆ ಎಂದಾದರೆ ಇಂಥಾ ನಾಟಕ ಇನ್ನೂ ಬರೆಯಬೇಕು ಅನ್ನಿಸಿತು.

Saturday, June 16, 2012

ಹುಲಿಯ ಕಥೆ: ಮತ್ತೆ ಕೆಲವು ಫೊಟೋ



ಹುಲಿಯ ಕಥೆ: ಮತ್ತಷ್ಟು ಫೊಟೋಗಳು

ಫೊಟೋದಲ್ಲಿರುವವರು ಡಾ. ನ. ರತ್ನ (ಲೇಖಕ), ಹರಿಲಾಲ್ (ಕೆ. ವಿ. ಘನಶ್ಯಾಮ), ಗಾಂಧೀಜಿ (ಕೆ. ಎನ್. ವಾಸುದೇವಮೂರ್ತಿ), ಸೀತೆ (ಇಂದಿರಾ ನಾಯರ್), ತಾಪಸಿ (ಸರ್ವಮಂಗಳಾ), ಮಂಥರೆ (ರತ್ನ ವಿಶ್ವನಾಥ್), ರಾಮ (ಬಿ ಆರ್. ರವೀಶ್), ಲವ (ಸಹಮತ--ಇವರೇ ನಾಟಕದ ನಿರ್ದೇಶಕಿ; ಕೊನೆಯ ಫೊಟೋದಲ್ಲಿ ಬಲ ಬದಿ), ಕುಶ (ನಿಧಿ ಎಂ. ಆತ್ರೇಯ).

ಹುಲಿಯ ಕಥೆ ಫೊಟೋಗಳು

ಇದರಲ್ಲಿರುವವರು ಸಹಮತ ಬೊಳ್ವಾರ್ ಮತ್ತು ನಿಧಿ ಎಂ. ಆತ್ರೇಯ ಲವ ಹಾಗು ಕುಶರಾಗಿ; ಸೀತೆಯಾಗಿ ಇಂದಿರಾ ನಾಯರ್; ತಾಪಸಿಯಾಗಿ ಸರ್ವಮಂಗಳಾ; ರಾಮನಾಗಿ ಬಿ. ಆರ್. ರವೀಶ್.

Tuesday, June 12, 2012

ನಾಗರಾಜ ರಾವ್ ಜವಳಿ

ನಾಗರಾಜ ರಾವ್ ಜವಳಿ ನನ್ನ ಬ್ಲಾಗಿನ ಫೊಲೊಯರ್ ಆಗಿದ್ದವರು. ನನಗೆ ಅವರು ತೀರ್ಥಹಳ್ಳಿಯವರು, ಸಾಹಿತ್ಯ-ಸಂಸ್ಕೃತಿಗಳಲ್ಲಿ ಗಂಭೀರ ಆಸಕ್ತಿ ಉಳ್ಳವರು ಎಂದು ಮಾತ್ರ ಗೊತ್ತಿತ್ತು. ಆದರೆ ನಿನ್ನೆ ಅವರ ಅಕ್ಕ ಶ್ರೀಮತಿ ಸರಸ್ವತಿ ಪ್ರಭು ಮಾತಾಡುತ್ತಾ ಅವರು ಕಳೆದ ವರ್ಷ ನವೆಂಬರಿನಲ್ಲಿ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಿದರು. ನಿನ್ನೆ ಸರಸ್ವತಿ ಪ್ರಭು ತಿಳಿಸಿದ ಮೇಲೇ ಅವರು ಅಕ್ಕ-ತಮ್ಮ ಎಂದೂ ನನಗೆ ಗೊತ್ತಾದದ್ದು. ಸರಸ್ವತಿ ಪ್ರಭು ನನ್ನ ನಾಟಕ ಕುದುರೆ ಬಂತು ಕುದುರೆಯನ್ನು ಹಿಂದಿಗೆ ಅನುವಾದಿಸಿದ್ದರು. ಹೀಗಾಗಿ ಅವರು ನನಗೆ ಹೆಚ್ಚು ಪರಿಚಯ. ಆ ಅನುವಾದ ಬಿ. ವಿ ಕಾರಂತರೂ ಸೇರಿದಂತೆ ಅನೇಕ ಹಿಂದಿ ಸಾಹಿತ್ಯ ಬಲ್ಲವರ ಮೆಚ್ಚುಗೆಗೆ ಪಾತ್ರವಾಗಿತ್ತು.

ತಡವಾಗಿಯಾದರೂ, ನಾಗರಾಜ ಜವಳಿ ಅವರಿಗೆ ಈ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. ಆ ನೋವು ಸಹಿಸುವ ಶಕ್ತಿ ಅವರ ಅಕ್ಕ ಸರಸ್ವತಿ ಪ್ರಭು ಸೇರಿದಂತೆ ಅವರ ಕುಟುಂಬದ ಮತ್ತು ಅವರನ್ನು ಬಲ್ಲ ಎಲ್ಲರಿಗೆ ಸಿಕ್ಕಲಿ ಎಂದು ಬಯಸುತ್ತೇನೆ.

Monday, June 11, 2012

ಹುಲಿಯ ಕಥೆ

ಮೊನ್ನೆ ಜೂನ್ 9ರಂದು ಮೈಸೂರಿನ ಸಮತೆಂತೋ ತಂಡದವರು ನನ್ನ ನಾಟಕ ಹುಲಿಯ ಕಥೆ ಆಡಿದರು. ಇದು ಎರಡು ವರ್ಷಗಳ ಹಿಂದೆ ಪ್ರಕಟವಾದ ಈ ನಾಟಕದ ಮೊದಲ ಪ್ರಯೋಗ. ನಾನು ಇದನ್ನು ಸ್ನೇಹಿತರೊಬ್ಬರ ಹತ್ತಿರ world premier ಎಂದು ಕರೆದುಕೊಂಡೆ. ಅಮೇರಿಕಾದವರೋ ಇಂಗ್ಲೆಂಡಿನವರೋ ತಮ್ಮ ಊರಿನಲ್ಲಿ ನಾಟಕ ಆಡಿ ಅದನ್ನು world premier ಅಂದುಕೊಳ್ಳಬಹುದಾದರೆ ನಾವೇಕೆ ಅಂದುಕೊಳ್ಳಬಾರದು ಎಂದುದಕ್ಕೆ ಹೌದು ಎಂದು ಅವರೂ ನಗಾಡಿದರು.

ರಂಗಾಯಣದವರು ಮೈಸೂರಿನ ನಾಟಕ ತಂಡಗಳ ಒಂದು ಉತ್ಸವ ಏರ್ಪಡಿಸಿದ್ದರು. ಅಲ್ಲಿ ಆಡಿದ ನಾಟಕ ಇದು. House full ಆದ್ದು ಮಾತ್ರವಲ್ಲದೆ ನಾಟಕ ಮುಗಿದ ಮೇಲೆ ಪ್ರೇಕ್ಷಕರು ಉತ್ಸಾಹದ ಪ್ರತಿಕ್ರಿಯೆ ತೋರಿಸಿದರು.

ಸಮತೆಂತೋ ನನಗೆ ಆಧುನಿಕ ರಂಗಭೂಮಿಯನ್ನು ಮೊದಲು ಪರಿಚಯಿಸಿದ ಸಂಸ್ಥೆ. ಹಳ್ಳಿಯಿಂದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ 1966ರಲ್ಲಿ ಓದಲು ಹೋದ ನನಗೆ ಸಮತೆಂತೋ ಆಡಿದ ಪೂರ್ಣಚಂದ್ರ ತೇಜಸ್ವಿಯವರ ಯಮಳ ಪ್ರಶ್ನೆ, ಡಾ. ರತ್ನರ ಎಲ್ಲಿಗೆ?, ಚೆಕಾವ್ ನ ಕಾಡ್ಮನ್ಸ ಮೊದಲಾದವು ನೋಡಲು ಸಿಕ್ಕಿದ್ದು ಅದೃಷ್ಟ. ಎಲ್ಲಿಗೆ? ನನ್ನ ಮೇಲೆ ತುಂಬಾ ಪ್ರಭಾವ ಬೀರಿದ ನಾಟಕ. ಅದರಲ್ಲಿ ಎಚ್. ಎಂ. ಚೆನ್ನಯ್ಯ ಶಿರಡಿ ಸಾಯಿಬಾಬಾನ ಹಾಗೆ ಕೂತುಕೊಳ್ಳುವುದು ಮತ್ತು ಆ ಗೆಶ್ಚರಿನ ಧ್ವನಿಶಕ್ತಿ ಸಾಯಿಬಾಬಾನ ಭಕ್ತರ ಊರಿನಿಂದ ಹೋಗಿದ್ದ ನನಗೆ ತುಂಬಾ ಇಷ್ಟವಾದವು. ಮುಂದೆ 1973ರಲ್ಲಿ ಸಮತೆಂತೋದವರ ಕದಡಿದ ನೀರು ನಾಟಕದಲ್ಲಿ ನಾನು ಶಂಕರನ ಪಾತ್ರ ಮಾಡಿದ್ದೆ. ಆ ಮೇಲೆ ಮೈಸೂರು ಬಿಟ್ಟದ್ದರಿಂದ ಅವರ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಹೊರಟುಹೋಯಿತು.

ಆಗ ಕದಡಿದ ನೀರುನಲ್ಲಿ ಮಲ್ಲಿ ಪಾತ್ರ ಮಾಡಿದ ಇಂದಿರಾ ನಾಯರ್ ಹುಲಿಯ ಕಥೆಯಲ್ಲಿ ಸೀತೆಯ ಪಾತ್ರ ಮಾಡಿದ್ದರು. ಮೂವತ್ತೈದು ವರ್ಷಗಳ ಬಳಿಕ ಈಗ ಮತ್ತೆ ಪಾತ್ರ ಮಾಡುತ್ತಿದ್ದಾರೆ. ತುಂಬಾ ಒಳ್ಳೆಯ ನಟಿಯಾದ ಅವರನ್ನು ಮತ್ತೆ ಭೇಟಿಯಾದದ್ದೇ ನನಗೆ ಸಂತೋಷದ ವಿಷಯವಾಗಿತ್ತು. ಇನ್ನೊಬ್ಬರು ನಟಿ ಸರ್ವಮಂಗಳಾ. ಅವರೂ ಅಭಿನಯಿಸದೆ ಅನೇಕ ವರ್ಷಗಳಾದವಂತೆ. ಡಾ. ರತ್ನ, ಅವರ ಮನೆಯವರು, ಹಳೆಯ ಸ್ನೇಹಿತ ರಘುನಾಥ್ ಮತ್ತು ಅವರ ಮನೆಯವರು, ಬಸವರಾಜ್--ಈ ಹಳೆಯ ಸ್ನೇಹಿತರನ್ನೆಲ್ಲಾ ಮತ್ತೆ ಭೇಟಿಯಾದದ್ದು ನನಗೆ ನನ್ನ ನಾಟಕ ಆಡಿದ್ದನ್ನು ನೋಡಿದಷ್ಟೇ ಖುಷಿ ಕೊಟ್ಟಿತು.

ಇದನ್ನು ನಿರ್ದೇಶಿಸಿದವರು ಸಹಮತ್. ಅತ್ಯಂತ ಚಿಕ್ಕ ವಯಸ್ಸಿನ ನಿರ್ದೇಶಕಿ. ಆದರೆ ಅವರ ಆತ್ಮವಿಶ್ವಾಸ ದೊಡ್ಡದನ್ನು ಸಾಧಿಸುವವರಲ್ಲಿ ಇರಲೇಬೇಕಾದ ಆತ್ಮವಿಶ್ವಾಸ. 

ಪ್ರಯೋಗದಲ್ಲಿ ಅನೇಕ ಕೊರತೆಗಳಿವೆ. ಆದರೆ ಇದು ಮೊದಲ ಪ್ರಯೋಗ. ಅವೆಲ್ಲಾ ಮುಂದೆ ಸರಿಯಾಗುವಂಥದು.

Saturday, June 2, 2012

THEATRE UNIVERSITY

ಸ್ನೇಹಿತರೊಬ್ಬರು ರಂಗಾಯಣದ ಕೆಲವರನ್ನು ಬೇರೆ ಕಡೆಗೆ ವರ್ಗ ಮಾಡಿರುವುದರ ಬಗ್ಗೆ ಲೇಖನ ಬರೆದು ನಮ್ಮ ಗಮನ ಸೆಳೆದಿದ್ದಾರೆ.

ಅದರ ಬಗ್ಗೆ ಪ್ರತಿಭಟನೆ ಸಲ್ಲಿಸಬಹುದು; ಸದ್ಯಕ್ಕೆ ಅದನ್ನು ಬದಲಾಯಿಸುವಂತೆ ಒತ್ತಡ ಹೇರಲೂ ಸಾಧ್ಯವಾಗಬಹುದು. ಆದರೆ ರಂಗಾಯಣದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಿದ್ದರೆ ಅದನ್ನೊಂದು ಥಿಯೇಟರ್ ಯುನಿವರ್ಸಿಟಿಯಾಗಿ ಬೆಳೆಸುವುದು ಹೊರತು ಬೇರೆ ಮಾರ್ಗವಿಲ್ಲ. ಥಿಯೇಟರಿಗೆ ಸಂಬಂಧಪಟ್ಟ ಎಲ್ಲಾ ಸರಕಾರಿ ಸಂಸ್ಥೆಗಳು ಒಟ್ಟುಗೂಡಿ ಅದರ ಜೊತೆ ಸೇರಿ ಕೆಲಸ ಮಾಡುವಂತೆ ಅದನ್ನು ಥಿಯೇಟರ್ ವಿಶ್ವವಿದ್ಯಾನಿಲಯವಾಗಿ ರೂಪಿಸಿ ಬೆಳೆಸಬೇಕು.

ಯುನಿವರ್ಸಿಟಿ ಆದ ಕೂಡಲೇ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂದಲ್ಲ. ಬೇರೆ ಯುನಿವರ್ಸಿಟಿಗಳಲ್ಲಿರುವ ಸಮಸ್ಯೆಗಳು ನನಗೆ ಗೊತ್ತಿವೆ. ಆದರೆ ಯುನಿವರ್ಸಿಟಿ ಆದೊಡನೆ ನಾವು ಸಮಸ್ಯೆಗಳ ಪರಿಹಾರಕ್ಕಾಗಿ ಥಿಯೇಟರಿಗೆ ಸಂಬಂಧಪಟ್ಟವರೊಡನೆ ವ್ಯವಹರಿಸಬಹುದು. ಕೊನೆಯ ಪಕ್ಷ ಥಿಯೇಟರ್ ಎಂದರೆ ಏನೆಂದು ಗೊತ್ತಿರುವವರೊಡನೆ ಮಾತಾಡಬಹುದು. ಒಂದು ಸಮಾನ ವೇದಿಕೆ ಸಿಗುತ್ತದೆ.

ರಂಗಾಯಣವನ್ನು ಥಿಯೇಟರ್ ಯುನಿವರ್ಸಿಟಿಯಾಗಿ ಮಾಡಿ ಎಂದು ನಾವೀಗ ಒತ್ತಾಯಿಸಬೇಕಿದೆ.